ದಸರಾಗೆ ಚಾಲನೆ ನೀಡಿದ ಬಾನು ಮುಷ್ತಾಕ್ : 'ದಸರಾ ಕೇವಲ ಹಬ್ಬವಲ್ಲ, ಇದು ನಾಡಿನ ಸಂಸ್ಕೃತಿ'

 

Mysore
ಮೈಸೂರು: ದಸರಾ ಕೇವಲ ಒಂದು ಹಬ್ಬ ಮಾತ್ರವಲ್ಲ, ಇದು ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮನ್ವಯದ ಮೇಳ ಎಂದು ಖ್ಯಾತ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ದೀಪ ಬೆಳಗಿಸಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ನನ್ನ ಆತ್ಮೀಯ ಗೆಳತಿ ನನಗೆ ಬೂಕರ್ ಪ್ರಶಸ್ತಿ ಸಿಗಲೆಂದು ಚಾಮುಂಡಿ ತಾಯಿಯ ಬಳಿ ಹರಕೆ ಹೊತ್ತಿದ್ದಳು. ಈ ವಿಶಿಷ್ಟ ಸಂದರ್ಭದಲ್ಲಿ ಆ ಹರಕೆ ಈಡೇರಿದೆ. ವೇದಿಕೆಯ ಮೇಲೆ ನಿಮ್ಮೆದುರು ನಿಂತಿರುವುದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ" ಎಂದು ಹೇಳಿದರು.

‘ಮೈಸೂರು ಸರ್ವಜನಾಂಗದ ಶಾಂತಿಯ ತೋಟ’

"ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಲ್ಲೂ ಈ ನಾಡಿನ ನಾಡಿಮಿಡಿತ ಮತ್ತು ಸ್ಪಂದನೆಯಿದೆ. ಇದು ವಿಭಿನ್ನತೆಯಲ್ಲಿ ಏಕತೆ ಇರುವ ಹಬ್ಬ. ಮೈಸೂರಿನ ಉರ್ದು ಭಾಷಿಕರು ದಸರಾಕ್ಕೆ 'ಸಿಲ್ಹಿಂಗನ್' ಎಂದು ಹೆಸರಿಟ್ಟಿದ್ದಾರೆ. ಇದು ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಹಬ್ಬ" ಎಂದು ಅವರು ತಿಳಿಸಿದರು. ತಮ್ಮ ಮಾವ ಮೈಸೂರು ಮಹಾರಾಜರ ಅಂಗರಕ್ಷಕರಾಗಿದ್ದರು ಎಂಬುದನ್ನು ನೆನಪಿಸಿಕೊಂಡು, ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ತಮ್ಮ ರಕ್ಷಕರನ್ನಾಗಿ ಮಾಡಿಕೊಂಡಿದ್ದರು. ಅವರು ಮುಸ್ಲಿಮರನ್ನು ಅನುಮಾನದಿಂದ ನೋಡುತ್ತಿರಲಿಲ್ಲ ಎಂದು ಹೇಳಿದರು.

"ನನ್ನ ಧಾರ್ಮಿಕ ನಂಬಿಕೆಗಳು ಜೀವಪರ. ನಾವು ಅಸ್ತ್ರಗಳು ಅಥವಾ ದ್ವೇಷದಿಂದ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ. ಅಕ್ಷರ ಮತ್ತು ಪ್ರೀತಿಯಿಂದ ಮಾತ್ರ ಜೀವನವನ್ನು ಗೆಲ್ಲಬಹುದು. ಮೈಸೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಾವು ಪರಸ್ಪರ ಗೌರವದಿಂದ ಬದುಕೋಣ. ಎಲ್ಲರೂ ಒಟ್ಟಾಗಿ ಸೌಹಾರ್ದಯುತವಾಗಿ ಇರೋಣ. ನಾವು ಎಲ್ಲರೂ ಒಂದೇ ಆಕಾಶದ ಪ್ರಯಾಣಿಕರು" ಎಂದರು. "ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸಿಕೊಂಡಿದ್ದೇವೆ, ನಾವು ಆ ಗಡಿಗಳನ್ನು ತೊಡೆದು ಹಾಕೋಣ" ಎಂದು ಅವರು ಕರೆ ನೀಡಿದರು.

ಇದೇ ವೇಳೆ, ತಾವು ನೂರಾರು ಕಾರ್ಯಕ್ರಮಗಳಲ್ಲಿ ಪುಷ್ಪಾರ್ಚನೆ ಮಾಡಿದ್ದು, ಹಲವು ಬಾರಿ ಮಂಗಳಾರತಿ ಸ್ವೀಕರಿಸಿದ್ದೇನೆ. ತಮ್ಮ ಮತ್ತು ಹಿಂದೂ ಧರ್ಮದ ಬಾಂಧವ್ಯವನ್ನು ತಮ್ಮ ಆತ್ಮಕಥೆಯಲ್ಲಿ ಬರೆದಿದ್ದು, ಆ ಪುಸ್ತಕ ನಾಳೆ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೈತಿಕ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಜಾಹೀರಾತುಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments