ಬೆಂಗಳೂರು: ಇಂದಿನ ವೇಗದ ಬದುಕಿನಲ್ಲಿ ಜನರು ಹೆಚ್ಚಿನ ಸಮಯವನ್ನು ಮನೆ ಅಥವಾ ಕಚೇರಿಯೊಳಗೆ ಕಳೆಯುತ್ತಿದ್ದಾರೆ. ಇದರಿಂದಾಗಿ ಸೂರ್ಯನ ಬೆಳಕಿನ ಸಂಪರ್ಕ ಕಡಿಮೆಯಾಗಿದ್ದು, ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ ಡಿ ಕೊರತೆ ವೇಗವಾಗಿ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಭಾರತದಲ್ಲೇ 70–80% ಜನರಿಗೆ ವಿಭಿನ್ನ ಮಟ್ಟದಲ್ಲಿ ವಿಟಮಿನ್ ಡಿ ಕೊರತೆ ಇದೆ. ಈ ಕೊರತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ವಿಟಮಿನ್ ಡಿ ಎಲುಬುಗಳು, ಸ್ನಾಯುಗಳು ಮತ್ತು ದೇಹದ ಸಮಗ್ರ ಆರೋಗ್ಯಕ್ಕೆ ಅನಿವಾರ್ಯ. ಇದು ಕೇವಲ ಎಲುಬಿನ ಬಲವರ್ಧಕವಲ್ಲ, ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ, ಹೃದಯದ ಆರೋಗ್ಯದಲ್ಲಿ, ಮಧುಮೇಹ ನಿಯಂತ್ರಣದಲ್ಲಿ, ಖಿನ್ನತೆ ತಡೆಗಟ್ಟುವಲ್ಲಿ ಹಾಗೂ ಕೆಲವು ಕ್ಯಾನ್ಸರ್‌ಗಳನ್ನು ದೂರವಿಡುವಲ್ಲಿ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಆದರೂ, ಈ ಪೋಷಕಾಂಶದ ಕೊರತೆಯನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕೊರತೆಯಿಂದ ಉಂಟಾಗುವ ತೊಂದರೆಗಳು
• ತಜ್ಞರ ಪ್ರಕಾರ ವಿಟಮಿನ್ ಡಿ ಕೊರತೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.
• ಎಲುಬುಗಳು ಮೃದುವಾಗಿ ಕೀಲುಗಳ ಕ್ಷೀಣತೆ ಉಂಟಾಗುತ್ತದೆ. ಮೊಣಕಾಲು ನೋವು, ಬೆನ್ನು ನೋವು, ಭುಜ ನೋವು ಸಾಮಾನ್ಯ ಲಕ್ಷಣ.
• ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚುತ್ತಿದ್ದು, ಅಲ್ಪ ಬಿದ್ದರೂ ಮುರಿತದ ಅಪಾಯ ಹೆಚ್ಚುತ್ತದೆ.
• ದೀರ್ಘಕಾಲದ ಸ್ನಾಯು ನೋವು, ದೌರ್ಬಲ್ಯ ಮತ್ತು ಶಕ್ತಿಹೀನತೆ.
• ರೋಗನಿರೋಧಕ ಶಕ್ತಿ ಕುಸಿದು, ಜ್ವರ, ಶೀತ, ಶ್ವಾಸಕೋಶದ ಸೋಂಕು ಪದೇ ಪದೇ ಉಂಟಾಗುವುದು ಕಂಡುಬರುತ್ತದೆ.
• ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ, ಖಿನ್ನತೆ ಮತ್ತು ಕೆಲವು ಕ್ಯಾನ್ಸರ್‌ಗಳಿಗೆ ಕಾರಣವಾತದೆ.
ಹೇಗೆ ತಡೆಗಟ್ಟಬಹುದು?
1. ಸೂರ್ಯನ ಬೆಳಕು – ಸಹಜ ಪರಿಹಾರ
ವಿಟಮಿನ್ ಡಿ ಮುಖ್ಯ ಮೂಲವೇ ಸೂರ್ಯನ ಬೆಳಕು. ತಜ್ಞರ ಸಲಹೆಯಂತೆ ವಾರಕ್ಕೆ 3–4 ಬಾರಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರೊಳಗೆ 15–30 ನಿಮಿಷ ಮುಖ, ತೋಳು ಮತ್ತು ಕಾಲುಗಳನ್ನು ನೇರ ಸೂರ್ಯನ ಬೆಳಕಿಗೆ ಒಡ್ಡುವುದು ಅವಶ್ಯಕ. ಆದರೆ ಅತಿಯಾಗಿ ಒಡ್ದುವುದು ತಪ್ಪಿಸಿ, ಚರ್ಮ ಸುಡುವ 10 ನಿಮಿಷ ಮುಂಚೆಯೇ ತಡೆಯುವುದು ಉತ್ತಮ. ಪ್ರತಿದಿನ ಕನಿಷ್ಠ 30 ನಿಮಿಷ ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಹ ಅನಿವಾರ್ಯ.
2. ಆಹಾರದಲ್ಲಿ ಬದಲಾವಣೆ
ವಿಟಮಿನ್ ಡಿ ಹೊಂದಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ.
ಮೀನಿನ ಕೊಬ್ಬು: ಸಾಲ್ಮನ್, ಸಾರ್ಡೀನ್, ಮ್ಯಾಕೆರೆಲ್
ಮೊಟ್ಟೆಯ ಹಳದಿ
ಬಲವರ್ಧಿತ ಹಾಲು, ಮೊಸರು, ಧಾನ್ಯಗಳು
ಸೂರ್ಯನ ಬೆಳಕಿಗೆ ಒಡ್ಡಿದ ಅಣಬೆ
ಅದೇ ರೀತಿ ವಿಟಮಿನ್ ಡಿ ಪರಿಣಾಮಕಾರಿ ಆಗಲು ಮೆಗ್ನೀಸಿಯಮ್ ಮತ್ತು ವಿಟಮಿನ್ K ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಅಗತ್ಯ. ಬಾದಾಮಿ, ಕಡಲೆಕಾಯಿ, ರಾಗಿ, ಕಡಲೆ, ಬೇಳೆ, ಹಸಿರು ಎಲೆ ತರಕಾರಿಗಳು, ಎಲೆಕೋಸು, ಹೂಕೋಸು, ಬೆಂಡೆಕಾಯಿ ಇತ್ಯಾದಿಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಉತ್ತಮ.
3. ಪೂರಕಗಳ ಅವಶ್ಯಕತೆ
ತೀವ್ರ ಕೊರತೆಯುಳ್ಳವರಿಗೆ ವೈದ್ಯರು ವಿಟಮಿನ್ ಡಿ ಪೂರಕಗಳನ್ನು ನೀಡುತ್ತಾರೆ. ಕೆಲವೊಮ್ಮೆ ತಿಂಗಳಿಗೆ ಒಂದು ಬಾರಿ ನೀಡುವ ವಿಟಮಿನ್ ಡಿ ಇಂಜೆಕ್ಷನ್‌ಗಳು ಸಹ ಬಳಸಲಾಗುತ್ತದೆ. ಆದರೆ ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಪೂರಕಗಳನ್ನು ಸೇವಿಸುವುದು ಅಪಾಯಕಾರಿಯಾಗಿದೆ.
ಆಧುನಿಕ ಜೀವನಶೈಲಿಯಿಂದಾಗಿ ಬಹುತೇಕ ಜನರು ದಿನದ ಹೆಚ್ಚಿನ ಹೊತ್ತು ಮನೆ ಹಾಗೂ ಕಚೇರಿ ಒಳಗಡೆಯಲ್ಲೇ ಕಳೆಯುತ್ತಿದ್ದಾರೆ. ತಂತ್ರಜ್ಞಾನ ಮತ್ತು ವೃತ್ತಿಜೀವನದ ಒತ್ತಡದಿಂದ ಹೊರಾಂಗಣ ಚಟುವಟಿಕೆ ಕಡಿಮೆಯಾಗಿದ್ದು, ಸೂರ್ಯನ ಬೆಳಕಿನ ಲಾಭದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಹ, ನಗರೀಕರಣದ ಪ್ರಭಾವದಿಂದ ಮಕ್ಕಳು ಮತ್ತು ಯುವಕರು ಆಟ-ಕ್ರೀಡೆಗಿಂತ ಮೊಬೈಲ್, ಕಂಪ್ಯೂಟರ್ ಕಡೆ ಹೆಚ್ಚು ತೊಡಗುತ್ತಿದ್ದಾರೆ. ಇದರ ಪರಿಣಾಮವಾಗಿ ಮುಂದಿನ ಪೀಳಿಗೆಯಲ್ಲಿಯೂ ವಿಟಮಿನ್ ಡಿ ಕೊರತೆ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುವ ಭೀತಿ ಇದೆ.
ಡಾ.ನಿತ್ಯಶ್ರೀ.ಕುಕ್ಕುಜಡ್ಕ
[BNYS, CCOT, (FMCN)]
ಜಾಹೀರಾತುಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments