ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಲ್ಕು ವರ್ಷಗಳಿಂದ ಕುಂಠಿತಗೊಂಡಿದ್ದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ಇದೀಗ ಹೊಸ ಹಾದಿ ಹಿಡಿದಿವೆ. ಕಾಬೂಲ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಪುನಃ ಸ್ಥಾಪಿಸಲು ಭಾರತ ಸರ್ಕಾರ ತೀರ್ಮಾನಿಸಿದ್ದು, ಇದರೊಂದಿಗೆ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಪುನರುಜ್ಜೀವನಗೊಳ್ಳುತ್ತಿದೆ.
ಆರು ದಿನಗಳ ಭಾರತ ಭೇಟಿಯಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ನಡುವೆ ನಡೆದ ಸುದೀರ್ಘ ಮಾತುಕತೆಯ ನಂತರ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
> “ಅಫ್ಘಾನಿಸ್ತಾನದ ಸಾರ್ವಭೌಮತೆ, ಭೌಗೋಳಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಭಾರತ ಬದ್ಧವಾಗಿದೆ. ಅಫ್ಘಾನಿಸ್ತಾನದಲ್ಲಿರುವ ‘ಟೆಕ್ನಿಕಲ್ ಮಿಷನ್’ ಅನ್ನು ಪೂರ್ಣ ಪ್ರಮಾಣದ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಅಲ್ಲಿನ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಕಾರ್ಯಗಳಲ್ಲಿ ಭಾರತ ಮುಂದುವರೆಯಲಿದೆ. ಈಗಿನ ಯೋಜನೆಗಳ ಜೊತೆಗೆ ಹೊಸದಾಗಿ ಆರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಪ್ರತಿಕ್ರಿಯೆ ನೀಡುತ್ತಾ,
> “ಎರಡೂ ದೇಶಗಳ ನಡುವೆ ಪರಸ್ಪರ ಗೌರವದ ಮತ್ತು ಜನಕೇಂದ್ರಿತ ಸಂಬಂಧ ಅಗತ್ಯ. ಭಾರತ ನಮ್ಮ ಪ್ರಮುಖ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ನಾವು ಕೂಡ ಭಾರತಕ್ಕೆ ನಮ್ಮ ರಾಯಭಾರಿಗಳನ್ನು ಕಳುಹಿಸಲು ಸಿದ್ಧರಾಗಿದ್ದೇವೆ. ಭಾರತ–ಅಫ್ಘಾನ್ ನಡುವೆ ವ್ಯಾಪಾರ, ಶಿಕ್ಷಣ ಮತ್ತು ಸಾಂಸ್ಕೃತಿಕ ಬಾಂಧವ್ಯ ವಿಸ್ತಾರಗೊಳ್ಳಲಿದೆ,” ಎಂದು ಹೇಳಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಅಫ್ಘಾನ್ ಸಚಿವರು ಉಗ್ರ ಸಂಘಟನೆಗಳ ವಿಷಯದಲ್ಲಿಯೂ ಸ್ಪಷ್ಟನೆ ನೀಡಿದರು.
“ನಮ್ಮ ನೆಲವನ್ನು ಯಾವುದೇ ರಾಷ್ಟ್ರದ ವಿರುದ್ಧದ ಚಟುವಟಿಕೆಗಳಿಗೆ ಬಳಸಲು ಬಿಡುವುದಿಲ್ಲ. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ ಸಂಘಟನೆಗಳನ್ನು ಈಗಾಗಲೇ ನಾವು ಮಟ್ಟ ಹಾಕಿದ್ದೇವೆ,” ಎಂದು ಮುತ್ತಖಿ ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರರು ಅಫ್ಘಾನಿಸ್ತಾನದ ನೆಲವನ್ನು ಭಾರತದ ವಿರುದ್ಧ ಬಳಸಬಹುದು ಎಂಬ ನವದೆಹಲಿ ಕಳವಳದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜೈಶಂಕರ್ ಅವರು,
“ಭಾರತವು ಯಾವತ್ತಿಗೂ ಅಫ್ಘಾನಿಸ್ತಾನದ ಜನರ ಜತೆ ನಿಂತಿದೆ. ಆ ದೇಶದ ಪುನರ್ ನಿರ್ಮಾಣ ಮತ್ತು ಶಾಂತಿಯತ್ತದ ಪ್ರಯಾಣದಲ್ಲಿ ನಾವು ಕೈ ಜೋಡಿಸುತ್ತೇವೆ,” ಎಂದು ಹೇಳಿದರು
ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ 2021ರಲ್ಲಿ ಭಾರತವು ತನ್ನ ಕಾಬೂಲ್ ರಾಯಭಾರ ಕಚೇರಿಯನ್ನು ಮುಚ್ಚಿಕೊಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ರಾಯಭಾರ ಕಚೇರಿ ಪುನಃ ತೆರೆಯುವ ನಿರ್ಧಾರವು ರಾಜತಾಂತ್ರಿಕವಾಗಿ ಭಾರತ–ಅಫ್ಘಾನಿಸ್ತಾನ ಸಂಬಂಧಕ್ಕೆ ಹೊಸ ಜೀವ ತುಂಬಲಿದೆ.


0 Comments