ಕಂಬಳಕ್ಕೆ ಹೈಕೋರ್ಟ್‌ನಿಂದ ಹಸಿರು ನಿಶಾನೆ: ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಜಯ

 

Ad
ಬೆಂಗಳೂರು: ಪ್ರಾಣಿ ದಯಾ ಸಂಘಟನೆ 'ಪೇಟಾ' (PETA) ತಕರಾರು ಅರ್ಜಿಯಿಂದಾಗಿ ಸ್ಥಗಿತಗೊಂಡಿದ್ದ ಮೈಸೂರು, ಬೆಂಗಳೂರು ಮತ್ತು ಶಿವಮೊಗ್ಗ ಕಂಬಳ ಆಯೋಜನೆಗೆ ಕೊನೆಗೂ ಕರ್ನಾಟಕ ಹೈಕೋರ್ಟ್ ಹಸಿರು ನಿಶಾನೆ ನೀಡಿದೆ. ಈ ಮಹತ್ವದ ತೀರ್ಪಿನ ಮೂಲಕ ಸರ್ಕಾರಿ ಅಧೀನದ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಮೊದಲ ಜಯ ಲಭಿಸಿದಂತಾಗಿದೆ.

ಈ ಕುರಿತು ಸಂತಸ ಹಂಚಿಕೊಂಡ ಕಂಬಳ ಅಸೋಸಿಯೇಶನ್‌ ಅಧ್ಯಕ್ಷ ಡಾ. ಬೆಳಪು ದೇವಿ ಪ್ರಸಾದ್‌ ಶೆಟ್ಟಿ, "ಇದು ನಮ್ಮ ಹೋರಾಟಕ್ಕೆ ಸಂದ ಜಯ. ಕಂಬಳ ಕ್ಷೇತ್ರದ ಪಾಲಿಗೆ ಇದು ಸಂತಸದ ಕ್ಷಣವಾಗಿದೆ" ಎಂದು ಹೇಳಿದರು. ಕೋಣಗಳ ಸಾಗಾಟದ ವೇಳೆ ಅವುಗಳಿಗೆ ಹಿಂಸೆಯಾಗುತ್ತದೆ ಎಂದು ಪೇಟಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ, ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿನೋದ್ ಕುಮಾರ್ ಮದೂರು ಮತ್ತು ಧನಂಜಯ್ ಕುಮಾರ್ ದೊಡ್ಡಗುತ್ತು ಅವರು ಕಂಬಳದ ಪರವಾಗಿ ಪ್ರಬಲ ವಾದ ಮಂಡಿಸಿದರು.

Ad

ಕಂಬಳವು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಮತ್ತು ಸರ್ಕಾರ ಕೂಡ ಇದಕ್ಕೆ ಮಾನ್ಯತೆ ನೀಡಿದೆ ಎಂಬ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ. "ಆಯಾ ಕಂಬಳ ಸಮಿತಿಯವರ ಹೋರಾಟಕ್ಕೆ ಫಲ ಸಿಕ್ಕಿದೆ" ಎಂದು ದೇವಿ ಪ್ರಸಾದ್ ಶೆಟ್ಟಿ ತಿಳಿಸಿದರು. ಆದರೆ, ಪಿಲಿಕುಳ ಕಂಬಳ ನಡೆಸುವ ಕುರಿತ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ ಎಂದು ಅವರು ಮಾಹಿತಿ ನೀಡಿದರು.

ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಮುಚೂರು ಲೋಕೇಶ್ ಶೆಟ್ಟಿ ಮಾತನಾಡಿ, "ಇದು ಐತಿಹಾಸಿಕ ದಿನ. ಕಂಬಳ ಅಸೋಶಿಯೇಷನ್‌ಗೆ ಸಂದ ಜಯ" ಎಂದು ಬಣ್ಣಿಸಿದ್ದು, ಸರ್ಕಾರದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೈಕೋರ್ಟ್ ತೀರ್ಪಿನಿಂದಾಗಿ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments