ಮಂಗಳೂರು: ನಗರದ ಕುಂಪಲ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಮಲತಂದೆಯೇ ಹಲವು ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿರುವ ಹೇಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಸಂತ್ರಸ್ತ ಬಾಲಕಿಗೆ ಆರು ವರ್ಷವಾಗಿದ್ದಾಗ ಆಕೆಯ ತಾಯಿ, ಪಾವೂರಿನ ಅಮೀರ್ ಎಂಬಾತನನ್ನು ಮದುವೆಯಾಗಿದ್ದರು. ಆರಂಭದಲ್ಲಿ ಕೆ.ಸಿ. ರೋಡ್‌ನಲ್ಲಿ ವಾಸವಾಗಿದ್ದ ಕುಟುಂಬ, ಬಳಿಕ ಕುಂಪಲದ ಬಾಡಿಗೆ ಮನೆಯಲ್ಲಿ ನೆಲೆಸಿತ್ತು.
ಬಾಲಕಿಗೆ ಏಳು ವರ್ಷ ತುಂಬಿದಾಗ, ಒಂದು ರಾತ್ರಿ ತಾಯಿ ಜೊತೆ ಮಲಗಿದ್ದ ಸಂದರ್ಭದಲ್ಲಿ ಮಲತಂದೆ ಅಮೀರ್ ಅತ್ಯಾಚಾರ ಎಸಗಿದ್ದ. ಬಾಲಕಿ ಕಿರುಚಾಡಲು ಯತ್ನಿಸಿದಾಗ ಆಕೆಯ ಬಾಯಿಗೆ ದಿಂಬು ಇಟ್ಟು ಬಲತ್ಕಾರ ಮಾಡಿದ್ದ ಎನ್ನಲಾಗಿದೆ. ಈ ಕಹಿ ಘಟನೆಯಿಂದ ನೊಂದ ಬಾಲಕಿ, ಉಳ್ಳಾಲದ ಮುಕ್ಕಚ್ಚೇರಿಯಲ್ಲಿರುವ ಅಜ್ಜಿ ಮನೆಯಲ್ಲಿ ನೆಲೆಸಿದ್ದಳು ಮತ್ತು ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದಳು.
ವರ್ಷಗಳ ಕಾಲ ದೌರ್ಜನ್ಯ:
ಕೆಲವು ಸಮಯದ ನಂತರ, ತಾಯಿಯ ಒತ್ತಾಯದ ಮೇರೆಗೆ ಅಪ್ರಾಪ್ತ ಬಾಲಕಿ ಮಲತಂದೆ ಇರುವ ಕುಂಪಲದ ಮನೆಗೆ ಬಂದು ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಇದೇ ಸಂದರ್ಭವನ್ನು ಬಳಸಿಕೊಂಡ ಅಮೀರ್, ಬಾಲಕಿಗೆ ಹನ್ನೆರಡು ವರ್ಷ ತುಂಬುವವರೆಗೂ ಅವಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕಿಗೆ 12 ವರ್ಷ ತುಂಬಿದಾಗ ಈ ವಿಷಯವನ್ನು ಆಕೆ ತನ್ನ ತಾಯಿಗೆ ತಿಳಿಸಿದ್ದಳು. ಆದರೆ, ತಾಯಿಯು "ಮನೆಯ ಮರ್ಯಾದೆ ಹರಾಜಾಗುತ್ತದೆ" ಎಂದು ಹೇಳಿ ಮಗಳ ಮನಸ್ಸನ್ನು ಸಮಾಧಾನಪಡಿಸಿ ಸುಮ್ಮನಾಗಿಸಿದ್ದಳು.
ಕೌನ್ಸೆಲಿಂಗ್ ವೇಳೆ ಬಯಲಾದ ಘಟನೆ:
ಕಳೆದ ಅಕ್ಟೋಬರ್ 18ರ ಶನಿವಾರದಂದು ಬಾಲಕಿ ತೀವ್ರ ಮಾನಸಿಕ ನೋವಿನಿಂದ ಕುಗ್ಗಿದ್ದಳು. ಕೂಡಲೇ ಕುಟುಂಬದವರು ಆಕೆಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ಬಾಲಕಿಯ ಕೌನ್ಸೆಲಿಂಗ್ ನಡೆಸಿದ ವೈದ್ಯರಲ್ಲಿ, ಆಕೆಯು ತನ್ನ ಮಲತಂದೆ ನಡೆಸಿದ ನಿರಂತರ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾಳೆ. ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಭಾನುವಾರ ಆರೋಪಿ ಅಮೀರ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಸದ್ಯ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

0 Comments