ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಆಸ್ಪತ್ರೆಯ ವೈದ್ಯರ ತಂಡವು ಅತಿ ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೇವಲ 14 ದಿನದ ಗಂಡು ಮಗುವಿನ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಮತ್ತೊಂದು ಭ್ರೂಣವನ್ನು (Fetus in Fetu) ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ವೈದ್ಯಕೀಯ ತಂಡ ಯಶಸ್ವಿಯಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ಸೆಪ್ಟೆಂಬರ್ 23 ರಂದು ಕಿಮ್ಸ್ ಆಸ್ಪತ್ರೆಯಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಗೂ ಮುನ್ನ ನಡೆಸಿದ ಅಲ್ಟ್ರಾಸೌಂಡ್ ಪರೀಕ್ಷೆಯ ವೇಳೆ ಕಿಮ್ಸ್‌ನ ತಜ್ಞೆ ಡಾ. ರೂಪಾಲಿ ಅವರು ಶಿಶುವಿನ ಹೊಟ್ಟೆಯೊಳಗೆ ಅಸಹಜವಾದ ರಚನೆಯೊಂದನ್ನು ಗಮನಿಸಿದ್ದರು. ಆದರೆ ಇದು ಸಹಜ ಹೆರಿಗೆಗೆ ಅಡ್ಡಿಯಾಗದ ಕಾರಣ, ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿತ್ತು.
ಅಪರೂಪದ 'ಫೀಟಸ್ ಇನ್ ಫೀಟು' ಪ್ರಕರಣ
ಜನನದ ನಂತರ ಶಿಶುವಿನ ಆರೋಗ್ಯ ಸ್ಥಿತಿ ಪರಿಶೀಲಿಸಿದ ವೈದ್ಯರು, ಮಗುವಿನ ಹೊಟ್ಟೆಯೊಳಗೆ ಸುಮಾರು ಎಂಟು ಸೆಂಟಿಮೀಟರ್ ಉದ್ದದ ಭ್ರೂಣದಂತಿರುವ ರಚನೆಯಿರುವುದನ್ನು ಖಚಿತಪಡಿಸಿಕೊಂಡರು. ತಕ್ಷಣ ಕಾರ್ಯಪ್ರವೃತ್ತರಾದ ತಜ್ಞ ವೈದ್ಯರ ತಂಡವು, ಸವಾಲನ್ನು ಎದುರಿಸಿ ಶಸ್ತ್ರಚಿಕಿತ್ಸೆ ನಡೆಸಿತು ಮತ್ತು ಆ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆಯಿತು.
ವೈದ್ಯಕೀಯ ಪರಿಭಾಷೆಯಲ್ಲಿ ಈ ವಿರಳ ಸ್ಥಿತಿಯನ್ನು 'ಫೀಟಸ್ ಇನ್ ಫೆಟು' ಅಥವಾ 'ಫೀಟಸ್ ಇಸ್ಪೀಟು' ಎಂದು ಕರೆಯಲಾಗುತ್ತದೆ. ಇದರರ್ಥ ಒಂದು ಭ್ರೂಣದ ದೇಹದೊಳಗೆ ಮತ್ತೊಂದು ಭ್ರೂಣ ಬೆಳೆಯುವುದು. ವೈದ್ಯಕೀಯ ವರದಿಗಳ ಪ್ರಕಾರ, ಪ್ರಪಂಚದಾದ್ಯಂತ ಇಂತಹ ಪ್ರಕರಣಗಳು ಬೆರಳಣಿಕೆಯಷ್ಟೇ ವರದಿಯಾಗಿವೆ.
ನವಜಾತ ಶಿಶುಗಳಿಗೆ ಅರಿವಳಿಕೆ (ಅನಸ್ತೇಶಿಯಾ) ನೀಡುವುದು ಮತ್ತು ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸೂಕ್ಷ್ಮ ಹಾಗೂ ವೈದ್ಯಕೀಯವಾಗಿ ಕಠಿಣವಾದ ಕೆಲಸವಾಗಿದೆ. ಇಂತಹ ಸವಾಲಿನ ಸಂದರ್ಭದಲ್ಲಿ, ಕಿಮ್ಸ್‌ನ ನುರಿತ ವೈದ್ಯರ ತಂಡವು ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಈ ಯಶಸ್ವಿ ಶಸ್ತ್ರಚಿಕಿತ್ಸೆ ವೈದ್ಯಕೀಯ ವಲಯದಲ್ಲಿ ಮಹತ್ವದ ಸಾಧನೆ ಎಂದು ಪರಿಗಣಿತವಾಗಿದೆ ಮತ್ತು ತಜ್ಞ ವೈದ್ಯರ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

.jpg)
0 Comments