ಭಾರತದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಲಾಗಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿರುವ ದೇಶಿ ಲಘು ಯುದ್ಧ ವಿಮಾನ ತೇಜಸ್ ಎಂಕೆ 1ಎ (Tejas Mk1A) ಜೆಟ್ ಶುಕ್ರವಾರ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೊದಲ ಬಾರಿಗೆ ಆಗಸದಲ್ಲಿ ಯಶಸ್ವಿ ಹಾರಾಟ ನಡೆಸಿದೆ.
ಈ ಐತಿಹಾಸಿಕ ಹಾರಾಟವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಜರುಗಿತು. ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಎಚ್‌ಎಎಲ್ ಕೇಂದ್ರದಲ್ಲಿ ಎಲ್‌ಸಿಎ ತೇಜಸ್ ಎಂಕೆ1ಎಯ ಮೂರನೇ ಉತ್ಪಾದನಾ ಘಟಕ ಮತ್ತು ಎಚ್ಟಿಟಿ-40 ರ ಎರಡನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
ಏರೋನಾಟಿಕಲ್ ಅಭಿವೃದ್ಧಿ ಏಜೆನ್ಸಿ (ಎಡಿಎ) ಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ವಿಮಾನ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರ (ಎಆರ್‌ಡಿಸಿ) ಸಹಯೋಗದೊಂದಿಗೆ ಈ ಭಾರತೀಯ ಬಹುವಿಧದ ಕಾರ್ಯಕ್ಷಮತೆಯ ಲಘು ಯುದ್ಧ ವಿಮಾನವನ್ನು ವಿನ್ಯಾಸಗೊಳಿಸಿದೆ. ತೇಜಸ್ ಎಂಕೆ 1ಎ ಜೆಟ್ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಳಿಗಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಎಚ್ಎಎಲ್ ಕೇಂದ್ರದಲ್ಲಿ ತಯಾರಾಗುತ್ತಿದೆ.
ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್ 21 ಯುದ್ಧ ವಿಮಾನಗಳ ಸ್ಥಾನವನ್ನು ಈ ತೇಜಸ್ ಎಂಕೆ 1ಎ ಯು ತುಂಬಲಿದ್ದು, ಇದು ಭಾರತೀಯ ವಾಯುಪಡೆಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ಈ ಸ್ವದೇಶಿ ನಿರ್ಮಿತ ಜೆಟ್‌ನ ಮೊದಲ ಹಾರಾಟವು ದೇಶದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಸಾಮರ್ಥ್ಯವನ್ನು ಮತ್ತಷ್ಟು ಎತ್ತಿ ಹಿಡಿದಿದೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

.jpg)
0 Comments