ಪುತ್ತೂರು: ನವೆಂಬರ್ 1ರಂದು ಸಂಜೆ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಪರ್ಪುಂಜ ಕೊಯಿಲತ್ತಡ್ಕದ ಅಬೋಡ್ ಹಾಲ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಜ್ಜಿ ಮತ್ತು ಅವರ ನಾಲ್ಕು ವರ್ಷದ ಮೊಮ್ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಈ ದುರ್ಘಟನೆಯಲ್ಲಿ, ಬೊಳ್ವಾರ್‌ನಿಂದ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ (ಕೆ.ಎ.21ಸಿ-3491) ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ನಾಲ್ಕೂವರೆ ವರ್ಷದ ಪುಟಾಣಿ ಸಜ್ಜಾ ಫಾತಿಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಹನೀಫ್ ಬನ್ನೂರು ಅವರ ಅತ್ತೆ ಝುಲೈಕಾ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವುದು ಆ ಭಾಗದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಪಡೀಲು ನಿವಾಸಿಯಾದ ಆಟೋ ಚಾಲಕ ಹನೀಫ್ ಬನ್ನೂರು ಅವರು ತಮ್ಮ ಪತ್ನಿ, ಅತ್ತೆ, ಬಾವನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಪರ್ಪುಂಜದ ಅಬ್ರಾಡ್ ಹಾಲ್ ಬಳಿ ತಲುಪುತ್ತಿದ್ದಂತೆ, ಎದುರಿನಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರು (ಲಕ್ಷ್ಮೀ ಬದಿರಾಜು ಚಲಾಯಿಸುತ್ತಿದ್ದರು) ರಿಕ್ಷಾಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಮಕ್ಕಳ ಆಟಿಕೆಯಂತೆ ನಜ್ಜುಗುಜ್ಜಾಗಿ ಉರುಳಿ ಬಿದ್ದಿದ್ದು, ಅದರ ಚಕ್ರಗಳು ಮತ್ತು ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರಿನ ಮುಂಭಾಗಕ್ಕೂ ಹಾನಿಯಾಗಿದ್ದು, ಘಟನೆಯ ತೀವ್ರತೆಯನ್ನು ಸಾರುತ್ತಿತ್ತು.
ಈ ಅಪಘಾತದಲ್ಲಿ ಚಾಲಕ ಹನೀಫ್ ಸೇರಿದಂತೆ ಆಟೋದಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ. ಅವರ ಬಾವನ ಹೆಂಡತಿ ಮತ್ತು ಮತ್ತೊಂದು ಮಗು ಪ್ರಸ್ತುತ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಲಕ್ಷ್ಮೀ ಬದಿರಾಜು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಆಟೋ ರಿಕ್ಷಾ ಚಾಲಕ ಹನೀಫ್ ಬನ್ನೂರು ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


0 Comments