ಕಡಬ ತಾಲೂಕಿನ ಎಡಮಂಗಲ ರೈಲು ನಿಲ್ದಾಣದ ಸಂಪರ್ಕ ರಸ್ತೆ ಹದಗೆಟ್ಟಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಸಮಸ್ಯೆಯ ಕುರಿತು ಬಳಕೆದಾರರು ಎಕ್ಸ್ (ಟ್ವಿಟರ್) ಮೂಲಕ ರೈಲ್ವೇ ಇಲಾಖೆಯ ಮೈಸೂರು ಡಿ.ಆರ್.ಎಂ ಅವರನ್ನು ಟ್ಯಾಗ್ ಮಾಡಿ ಗಮನ ಸೆಳೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಲಾಖೆ, ಚಿತ್ರದಲ್ಲಿ ತೋರಿಸಿರುವ ರಸ್ತೆಯು ಸಿಬ್ಬಂದಿ ಬಳಕೆಗೆ ಉದ್ದೇಶಿಸಿದ್ದು, ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗೆ ಈಗಾಗಲೇ ಕಾಂಕ್ರೀಟ್ ಹಾಕಲಾಗಿದೆ, ಅದು ಚೆನ್ನಾಗಿದೆ ಎಂದು ಫೋಟೋದೊಂದಿಗೆ ಸ್ಪಷ್ಟನೆ ನೀಡಿತ್ತು. ಇಲಾಖೆಯ ತ್ವರಿತ ಪ್ರತಿಕ್ರಿಯೆಗೆ ಶ್ಲಾಘನೆ ವ್ಯಕ್ತವಾಗಿದ್ದರೂ, ಇಲಾಖೆ ತಪ್ಪು ಮಾಹಿತಿ ನೀಡಿದೆ ಎಂದು ರೈಲು ಬಳಕೆದಾರರು ಆರೋಪಿಸಿದ್ದಾರೆ.
ಬಳಕೆದಾರರ ಪ್ರಕಾರ, ರೈಲ್ವೇ ಇಲಾಖೆಯು ಸಮಸ್ಯೆಯನ್ನು ಬಗೆಹರಿಸುವ ಬದಲು ವಿಷಯವನ್ನು ತಪ್ಪಿಸುವ ನಿಲುವು ತಾಳಿದೆ. ಇಲಾಖೆ ಕಾಂಕ್ರೀಟ್ ಮಾಡಲಾಗಿದೆ ಎಂದು ಹೇಳಿರುವ ರಸ್ತೆಯು ನಿಲ್ದಾಣದ ಎದುರು ಭಾಗದಲ್ಲಿ ಮಾತ್ರ ಕಾಂಕ್ರೀಟ್ ಆಗಿದ್ದು, ಉಳಿದ ಪ್ರಮುಖ ಭಾಗ ಇನ್ನೂ ಹೊಂಡಮಯವಾಗಿದೆ. ವಾಸ್ತವದಲ್ಲಿ, ರೈಲ್ವೇ ಇಲಾಖೆಯೇ ಹಿಂದೆ ಗುರುತಿಸಿದ ನಿಲ್ದಾಣದ ರಸ್ತೆ ಈಗ ತೀರಾ ಕೆಟ್ಟ ಸ್ಥಿತಿಯಲ್ಲಿದೆ ಎಂದು ದೂರಲಾಗಿದೆ. ಪ್ರಸ್ತುತ ರೈಲು ನಿಲ್ದಾಣಕ್ಕೆ ಎರಡು ಕಡೆಗಳಿಂದ ಸಂಪರ್ಕ ರಸ್ತೆ ಇದ್ದು, ಇವೆರಡೂ ರಸ್ತೆಗಳು ತೀರಾ ಹದಗೆಟ್ಟಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದಾಗಿ, ಇಲಾಖೆ ನೀಡಿದ ಮಾಹಿತಿ ಮತ್ತು ವಾಸ್ತವ ಸ್ಥಿತಿಗತಿ ನಡುವೆ ವ್ಯತ್ಯಾಸವಿದ್ದು, ರೈಲ್ವೇ ಇಲಾಖೆ ಉಳಿದ ರಸ್ತೆಗಳ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆಯೇ ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.
ಈ ನಡುವೆ, ಎಡಮಂಗಲದ ಪ್ರಮುಖ ಬೇಡಿಕೆಯಾದ ಓವರ್‌ಬ್ರಿಡ್ಜ್ (ಮೇಲುಸೇತುವೆ) ನಿರ್ಮಾಣದ ಯೋಜನೆಗೆ ಸಂಬಂಧಿಸಿದಂತೆ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ರೈಲು ಮಾರ್ಗ ಹಾದುಹೋಗುವುದರಿಂದ ಪದೇ ಪದೇ ಗೇಟ್ ಹಾಕಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಸರ್ವೆ ಮತ್ತು ಮಾಹಿತಿ ಸಂಗ್ರಹಣೆ ನಡೆಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ಅವರು, ಓವರ್‌ಬ್ರಿಡ್ಜ್ ನಿರ್ಮಾಣದ ಜೊತೆಗೆ ನಿಲ್ದಾಣದ ಸಂಪರ್ಕ ರಸ್ತೆಗಳ ಅಭಿವೃದ್ಧಿಯೂ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಸದ್ಯಕ್ಕೆ, ಹದಗೆಟ್ಟ ರಸ್ತೆಗಳ ಸಮಸ್ಯೆ ಪರಿಹಾರಕ್ಕಾಗಿ ರೈಲು ಬಳಕೆದಾರರು ರೈಲ್ವೇ ಇಲಾಖೆಗೆ ಮತ್ತೊಂದು ದೂರು ಸಲ್ಲಿಸಿದ್ದು, ಇಲಾಖೆಯ ಮುಂದಿನ ನಿರ್ಧಾರದ ಮೇಲೆ ಎಲ್ಲರ ಗಮನ ನೆಟ್ಟಿದೆ.
.jpg)
0 Comments