ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟಕ್ಕೆ? ಖರೀದಿಗೆ ಅದರ್ ಪೂನಾವಾಲಾ ಆಸಕ್ತಿ!

 

Ad
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ರಿಕೆಟ್ ತಂಡದ ಮಾಲೀಕತ್ವ ಬದಲಾವಣೆ ಆಗುವ ಸಾಧ್ಯತೆ ದಟ್ಟವಾಗಿದೆ. RCBಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನ ಮೂಲ ಕಂಪನಿ ಡಿಯಾಜಿಯೊ, ತನ್ನ ಕ್ರಿಕೆಟ್ ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ಪ್ರಾರಂಭಿಸಲು ಸಿದ್ಧವಾಗಿದೆ. ಮಾರ್ಚ್ 31, 2026 ರೊಳಗೆ ಐಪಿಎಲ್ (IPL) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ತಂಡಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್ (RCSPL) ನಲ್ಲಿನ ಹೂಡಿಕೆಯ ಮೌಲ್ಯಮಾಪನ ಮತ್ತು ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಡಿಯಾಜಿಯೊ ಹೊಂದಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಗೆ ನೀಡಿದ ಸಂವಹನದಲ್ಲಿ ತಿಳಿಸಿದೆ. ಕಂಪನಿಯು ತನ್ನ ಪ್ರಮುಖ ವ್ಯವಹಾರವಾದ ಮದ್ಯಪಾನ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಬಯಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಸ್ಪಿರಿಟ್ಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಸೋಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮಾಲೀಕರಾದ ಅದರ್ ಪೂನಾವಾಲಾ ಅವರು ಆರ್‌ಸಿಬಿ ತಂಡವನ್ನು ಖರೀದಿಸಲು ತೀವ್ರ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಿಂಟ್ ವರದಿಯ ಪ್ರಕಾರ, ಪೂನಾವಾಲಾ ಅವರು ಈ ಫ್ರಾಂಚೈಸಿಯನ್ನು 1 ರಿಂದ 1.2 ಶತಕೋಟಿ ಡಾಲರ್‌ಗಳ ಮೌಲ್ಯಕ್ಕೆ (ಸುಮಾರು ₹10,600 ಕೋಟಿ ಅಥವಾ ಅದಕ್ಕಿಂತ ಹೆಚ್ಚು) ಖರೀದಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಕ್ರಿಕೆಟ್ ತಂಡದ ವಾರ್ಷಿಕ ಆದಾಯದ ಸುಮಾರು 20 ಪಟ್ಟು ಹೆಚ್ಚು ಮೌಲ್ಯ ಎಂದು ತಜ್ಞರು ಅಂದಾಜಿಸಿದ್ದಾರೆ. ಪೂನಾವಾಲಾ ಕೇವಲ ಭಾಗಶಃ ಹೂಡಿಕೆ ಮಾಡುವ ಬದಲು, ಆರ್‌ಸಿಬಿ ಫ್ರಾಂಚೈಸಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.

ಕ್ರಿಕೆಟ್ ತಂಡದಿಂದ ಬರುವ ಆದಾಯ ಯುನೈಟೆಡ್ ಸ್ಪಿರಿಟ್ಸ್‌ನ ಒಟ್ಟು ಆದಾಯದಲ್ಲಿ ಅತಿ ಕಡಿಮೆ ಪಾಲು ಹೊಂದಿದೆ. ಕಳೆದ ವರ್ಷ ಪುರುಷರ ಐಪಿಎಲ್‌ನಲ್ಲಿ ಕಡಿಮೆ ಪಂದ್ಯಗಳನ್ನು ಆಡಿದ್ದರಿಂದ ಆರ್‌ಸಿಬಿ ತಂಡದ ಆದಾಯದಲ್ಲಿ 21% ಇಳಿಕೆ ಕಂಡು ₹504 ಕೋಟಿಗೆ ತಲುಪಿದೆ. ಹಾಗೆಯೇ, ಲಾಭದಲ್ಲೂ 36% ಇಳಿಕೆ ಕಂಡು ₹140 ಕೋಟಿಗೆ ತಲುಪಿದೆ. ಈ ಮೊತ್ತವು ಯುನೈಟೆಡ್ ಸ್ಪಿರಿಟ್ಸ್‌ನ ಒಟ್ಟು ಆದಾಯದ ಕೇವಲ 9% ಮಾತ್ರ. ಈ ವರದಿಗಳ ಹೊರತಾಗಿಯೂ, ಈ ವಿಷಯದ ಬಗ್ಗೆ ಡಿಯಾಗಿಯೋ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಅದರ್ ಪೂನಾವಾಲಾ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.


Post a Comment

0 Comments