ಏಷ್ಯಾ ಕಪ್ 2025ರ ಅತಿ ಹೆಚ್ಚು ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಭಾರತ-ಪಾಕಿಸ್ತಾನ ಕದನ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ರೋಮಾಂಚನ ನೀಡಿತು. ಆದರೆ ಈ ಬಾರಿ ಪಂದ್ಯ ಭಾರತ ಪರ ನಾಯಕ ಸೂರ್ಯಕುಮಾರ್ ಯಾದವ್ ಅವರ ಶಾಂತ ಹಾಗೂ ಹೊಣೆಗಾರಿಕೆಯಿಂದ ಕೂಡಿದ ಬ್ಯಾಟಿಂಗ್‌ನಿಂದಾಗಿ ಭಾರತವು ಪಾಕಿಸ್ತಾನವನ್ನು 7 ವಿಕೆಟ್ ಅಂತರದಿಂದ ಮಣಿಸಿತು. ಈ ಗೆಲುವಿನಿಂದ ಭಾರತವು ಗ್ರೂಪ್ "ಎ"ಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.
ಪಾಕಿಸ್ತಾನದ ಬ್ಯಾಟಿಂಗ್ ಹೋರಾಟ – 127/9 (20 ಓವರ್)
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡಕ್ಕೆ ಆರಂಭದಲ್ಲೇ ಆಘಾತವಾಯಿತು. ಸೈಮ್ ಆಯೂಬ್ (0) ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್‌ಗೆ ಬಲಿಯಾಗಿದರು. ನಂತರ ವಿಕೆಟ್ ಕೀಪರ್ ಮೊಹಮ್ಮದ್ ಹಾರಿಸ್ (3) ಕೂಡ ಶೀಘ್ರ ಪವಿಲಿಯನ್ ಸೇರಿದರು.
ಪಾಕಿಸ್ತಾನದ ಪರ ಹೆಚ್ಚು ಹೊಣೆ ಹೊತ್ತವರು ಸಾಮ್ ಫರ್ಹಾನ್. ಅವರು 40 (44) ರನ್ ಗಳಿಸಿದರು. ಕೆಲ ಹೊತ್ತಿಗೆ ಫಖರ್ ಜಮಾನ್ 17 (15) ರನ್ ಮಾಡಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಶೆಗೊಳಿಸಿದರು. ನಾಯಕ ಸಜಿದ್ ಅಘಾ (3), ಹೈದರ್ ನವಾಜ್ (5), ಅತಿ ಕಡಿಮೆ ರನ್‌ಗಳಿಗೆ ಔಟಾದರು.
ಕುಲದೀಪ್ ಯಾದವ್ 3ವಿಕೆಟ್,ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರು.
ಇದರಿಂದ ಪಾಕಿಸ್ತಾನ 20 ಓವರ್‌ಗಳಲ್ಲಿ ಕೇವಲ 127/9 ರನ್‌ಗಳಿಗೆ ಸೀಮಿತವಾಯಿತು.
ಭಾರತದ ಬ್ಯಾಟಿಂಗ್ – 131/3 (15.5 ಓವರ್)
128 ರನ್ ಗುರಿ ಬೆನ್ನಟ್ಟಿದ ಭಾರತ ದಿಟ್ಟ ಆರಂಭ ನೀಡಿತು. ಯುವ ಆಟಗಾರ ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 31 ರನ್ ಸಿಡಿಸಿದರು. 4 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಹೊಡೆದು ಪಾಕಿಸ್ತಾನ ಬೌಲರ್‌ಗಳಿಗೆ ಒತ್ತಡ ತಂದರು.
ಶುಭ್ಮನ್ ಗಿಲ್ (10) ಶೀಘ್ರ ಔಟಾದರೂ, ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ತಂಡವನ್ನು ನೆಮ್ಮದಿಗೆ ತಂದು ನಿಲ್ಲಿಸಿದರು. ತಿಲಕ್ ವರ್ಮಾ 31 (31) ರನ್ ಗಳಿಸಿದರು. ಕೊನೆಯ ಹೊತ್ತಿನಲ್ಲಿ ಶಿವಂ ದುಬೆ 10* (7) ರನ್ ಸಿಡಿಸಿ ಸೂರ್ಯಕುಮಾರ್ ಜೊತೆ ಅಜೇಯ ಉಳಿದರು.
ಹುಟ್ಟುಹಬ್ಬದ ಹೀರೋ ಸೂರ್ಯಕುಮಾರ್ ಯಾದವ್ 47* (37) ರನ್ ಗಳಿಸಿ, ನಾಯಕನಾಗಿ ಹೊಣೆಗಾರಿಕೆ ತೋರಿದರು. ಅವರ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು.
ಭಾರತ ಕೇವಲ 15.5 ಓವರ್‌ಗಳಲ್ಲಿ ಗುರಿ ತಲುಪಿ, 25 ಎಸೆತ ಬಾಕಿ ಇರುವಾಗಲೇ ಪಂದ್ಯ ಮುಗಿಯಿತು.
ಏಷ್ಯಾ ಕಪ್ 2025ರಲ್ಲಿ ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ ಇಲ್ಲವೇ ಎಂಬ ಗೊಂದಲಗಳ ನಡುವೆ ಕೊನೆಗೆ ಪಂದ್ಯ ಸಫಲವಾಗಿ ನಡೆದಿದ್ದು, ಭಾರತವು ಅದ್ಭುತ ಗೆಲುವು ಸಾಧಿಸಿದೆ.


0 Comments