ಶಾರದೀಯ ನವರಾತ್ರಿಯ ಐದನೇ ದಿನವನ್ನು ಭಕ್ತರು ಸ್ಕಂದಮಾತಾ ದೇವಿಗೆ ಸಮರ್ಪಿಸುತ್ತಾರೆ. ಪಾರ್ವತಿ ದೇವಿಯ ಈ ರೂಪದಲ್ಲಿ, ಅವಳು ತನ್ನ ಮಗ ಸ್ಕಂದ (ಕಾರ್ತಿಕೇಯ)ನನ್ನು ಮಡಿಲಲ್ಲಿ ಹೊತ್ತುಕೊಂಡಿರುವ ತಾಯಿಯ ಮಮತೆಯ ಪ್ರತಿರೂಪವಾಗಿರುತ್ತಾಳೆ.
ಸ್ಕಂದಮಾತಾ ಸಿಂಹದ ಮೇಲೆ ಸವಾರಿ ಮಾಡುವ ಐದು ಕೈಗಳ ದೇವಿಯಾಗಿ ಪುರಾಣಗಳಲ್ಲಿ ವರ್ಣಿಸಲಾಗಿದೆ. ಅವಳ ಎರಡು ಕೈಗಳಲ್ಲಿ ಕಮಲ, ಒಂದು ಕೈಯಲ್ಲಿ ಮಗ ಸ್ಕಂದ ಹಾಗೂ ಮತ್ತೊಂದು ಕೈಯಲ್ಲಿ ಭಕ್ತರ ಪಾಲಿಗೆ ಆಶೀರ್ವಾದದ ಅಭಯಮುದ್ರೆಯಿದೆ. ಈ ರೂಪದಲ್ಲಿ ದೇವಿ "ಕಮಲಾಸನ" ಎಂಬ ಹೆಸರಿನಿಂದಲೂ ಪ್ರಸಿದ್ಧಿ ಪಡೆದಿದ್ದಾಳೆ.
ಪೂಜಾ ವಿಧಾನ
ನವರಾತ್ರಿ ಐದನೇ ದಿನ, ಭಕ್ತರು ಪ್ರಾತಃಕಾಲದಲ್ಲೇ ಸ್ನಾನಮಾಡಿ ಹಳದಿ ಅಥವಾ ಕೆಂಪು ಬಟ್ಟೆ ಧರಿಸುತ್ತಾರೆ. ದೇವಿಗೆ ಹೂವು, ಅಕ್ಷತೆ, ಚಂದನ ಅರ್ಪಿಸಿ ಕಮಲ ಹೂವುಗಳಿಂದ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನೈವೇದ್ಯವಾಗಿ ಸಿಹಿತಿಂಡಿಗಳನ್ನು ಸಮರ್ಪಿಸಿ, ಭಕ್ತಿಪೂರ್ಣ ಆರತಿ ಮಾಡಲಾಗುತ್ತದೆ.
ಮಂತ್ರ
"ಓಂ ದೇವಿ ಸ್ಕಂದಮಾತಾಯೈ ನಮ:" ಎಂಬ ಮಂತ್ರವನ್ನು ಜಪಿಸುವ ಮೂಲಕ ಭಕ್ತರು ಶಾಂತಿ ಮತ್ತು ಸಂತೋಷವನ್ನು ಕೋರುತ್ತಾರೆ.
ಪೂಜೆಯ ಫಲ
ಸ್ಕಂದಮಾತೆಯನ್ನು ಆರಾಧಿಸುವ ಭಕ್ತರಿಗೆ ಜ್ಞಾನ, ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ದೊರೆಯುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ವಿಶೇಷವಾಗಿ ಮಕ್ಕಳ ಕ್ಷೇಮ ಮತ್ತು ಆರೋಗ್ಯಕ್ಕಾಗಿ ಈ ದಿನ ಭಕ್ತರು ದೇವಿಯನ್ನು ಪ್ರಾರ್ಥಿಸುತ್ತಾರೆ. ಪುರಾಣ ಪ್ರಕಾರ, ಸ್ಕಂದಮಾತೆಯ ಆರಾಧನೆಯಿಂದ ಮೋಕ್ಷಪ್ರಾಪ್ತಿಗೂ ದಾರಿ ತೆರೆದುಕೊಳ್ಳುತ್ತದೆ.
ಭಕ್ತರ ನಂಬಿಕೆಯ ಪ್ರಕಾರ, ಐದನೇ ದಿನ ಸ್ಕಂದಮಾತೆಯ ಆರಾಧನೆಯಿಂದ ತಾಯಿ ಮಮತೆಯ ರಕ್ಷಣೆ ಹಾಗೂ ಶಾಂತಿಮಯ ಜೀವನ ದೊರೆಯುತ್ತದೆ.




0 Comments