ಆಧುನಿಕ ಯುಗದಲ್ಲಿ ಮಾರುಕಟ್ಟೆಯ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಗ್ರಾಹಕರು ವಸ್ತು ಮತ್ತು ಸೇವೆಗಳನ್ನು ಬಳಸುವ ಪ್ರಮಾಣ ಹೆಚ್ಚಾದಂತೆ, ವಂಚನೆ, ಕೆಟ್ಟ ಗುಣಮಟ್ಟ, ತಪ್ಪಾದ ಜಾಹೀರಾತು, ಹೆಚ್ಚು ಬೆಲೆ ಇತ್ಯಾದಿ ಸಮಸ್ಯೆಗಳೂ ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯ ಜನರ ಹಕ್ಕುಗಳನ್ನು ಕಾಯ್ದುಕೊಳ್ಳಲು ಮತ್ತು ತ್ವರಿತ ನ್ಯಾಯ ಒದಗಿಸಲು ಗ್ರಾಹಕರ ನ್ಯಾಯಾಲಯಗಳು (Consumer Courts) ಮಹತ್ವದ ಪಾತ್ರ ವಹಿಸುತ್ತಿವೆ.
ಗ್ರಾಹಕರ ನ್ಯಾಯಾಲಯದ ಉದ್ದೇಶ
1986ರಲ್ಲಿ ಜಾರಿಗೆ ಬಂದ ಗ್ರಾಹಕರ ರಕ್ಷಣಾ ಕಾಯ್ದೆ (Consumer Protection Act) ಅಡಿಯಲ್ಲಿ ಈ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ನಂತರ 2019ರಲ್ಲಿ ತಿದ್ದುಪಡಿ ಮಾಡಿ ಇನ್ನಷ್ಟು ಬಲ ನೀಡಲಾಯಿತು. ಮುಖ್ಯ ಉದ್ದೇಶವೆಂದರೆ – ಗ್ರಾಹಕರಿಗೆ ತ್ವರಿತ, ಕಡಿಮೆ ವೆಚ್ಚದಲ್ಲಿ ಮತ್ತು ಸರಳ ವಿಧಾನದಲ್ಲಿ ನ್ಯಾಯ ಒದಗಿಸುವುದು. ಸಾಮಾನ್ಯ ನ್ಯಾಯಾಲಯಗಳಂತೆ ಸಂಕೀರ್ಣ ಪ್ರಕ್ರಿಯೆಗಳ ಅವಶ್ಯಕತೆಯಿಲ್ಲದೆ, ನೇರವಾಗಿ ಗ್ರಾಹಕರು ತಮ್ಮ ದೂರುಗಳನ್ನು ಇಲ್ಲಿ ದಾಖಲಿಸಬಹುದು.
ಭಾರತದಲ್ಲಿ ಗ್ರಾಹಕರ ನ್ಯಾಯಾಲಯಗಳ ಮೂರು ಹಂತಗಳಿವೆ:
1. ಜಿಲ್ಲಾ ಗ್ರಾಹಕರ ನ್ಯಾಯಾಲಯ (District Forum): ₹1 ಕೋಟಿವರೆಗಿನ ದೂರುಗಳನ್ನು ವಿಲೇವಾರಿ ಮಾಡುತ್ತದೆ.
2. ರಾಜ್ಯ ಗ್ರಾಹಕರ ಆಯೋಗ (State Commission): ₹1 ಕೋಟಿಯಿಂದ ₹10 ಕೋಟಿವರೆಗಿನ ಪ್ರಕರಣಗಳು ಹಾಗೂ ಜಿಲ್ಲಾ ನ್ಯಾಯಾಲಯದ ತೀರ್ಪುಗಳ ಮೇಲ್ಮನವಿ ನೋಡುತ್ತದೆ.
3. ರಾಷ್ಟ್ರೀಯ ಗ್ರಾಹಕರ ಆಯೋಗ (National Commission): ₹10 ಕೋಟಿಗೂ ಹೆಚ್ಚಿನ ಮೊತ್ತದ ಪ್ರಕರಣಗಳು ಮತ್ತು ರಾಜ್ಯ ಆಯೋಗದ ಮೇಲ್ಮನವಿ ವಿಚಾರಣೆ ಮಾಡುತ್ತದೆ.
2019ರಲ್ಲಿ ಗ್ರಾಹಕರ ಕಾಯ್ದೆಗೆ ತಿದ್ದುಪಡಿ ತರಲಾಯಿತು.
1. ಪರಿಹಾರ ಮೊತ್ತದ ಮಿತಿಯನ್ನು ₹30 ಲಕ್ಷಕ್ಕೆ ಏರಿಸಲಾಯಿತು.
2. ಆನ್‌ಲೈನ್ ವಸ್ತು ಮತ್ತು ಸೇವೆಗಳು ಕೂಡ ಕಾಯ್ದೆಯ ವ್ಯಾಪ್ತಿಗೆ ತರಲಾಯಿತು.
ಇದರಿಂದ ಡಿಜಿಟಲ್ ಜಗತ್ತಿನಲ್ಲಿ ನಡೆಯುವ ವಂಚನೆಗಳನ್ನೂ ಗ್ರಾಹಕರ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದು.
ದೂರು ನೀಡಬಹುದಾದ ಸಂದರ್ಭಗಳು
ಗ್ರಾಹಕರು ಕೆಳಗಿನ ಸಂದರ್ಭಗಳಲ್ಲಿ ದೂರು ದಾಖಲಿಸಬಹುದು:
ವಿಮೆ ಪಡೆದ ಬಳಿಕ ಕಂಪೆನಿ ಸೂಕ್ತ ಸೇವೆ ನೀಡಲು ನಿರಾಕರಿಸಿದಾಗ.
ಬಸ್, ರೈಲು ಅಥವಾ ವಿಮಾನದಲ್ಲಿ ಪ್ರಕಟಿಸಿದಂತೆ ಸೇವೆ ದೊರೆಯದಿದ್ದಾಗ.
ನಿಗದಿತ ತೂಕ ಅಥವಾ ಗುಣಮಟ್ಟಕ್ಕಿಂತ ಕಡಿಮೆ ವಸ್ತು ಮಾರಾಟ ಮಾಡಿದಾಗ.
ಕಳಪೆ ಸೇವೆ ಅಥವಾ ವಸ್ತು ನೀಡಿದಾಗ.
ದಿಕ್ಕು ತಪ್ಪಿಸುವ ಅಥವಾ ತಪ್ಪಾದ ಜಾಹೀರಾತು ಪ್ರಕಟಿಸಿದಾಗ.
ಈ ಸಂದರ್ಭಗಳಲ್ಲಿ ನ್ಯಾಯಾಲಯವು ಖರೀದಿಯಿಂದ ಗ್ರಾಹಕರಿಗೆ ಆದ ನಷ್ಟವನ್ನು ಅಂದಾಜಿಸಿ ಪರಿಹಾರ ಮೊತ್ತವನ್ನು ನಿಗದಿಪಡಿಸುತ್ತದೆ.
ದೂರು ಸಲ್ಲಿಸುವ ವಿಧಾನ
ಗ್ರಾಹಕರು ತಪ್ಪಾದ ಉತ್ಪನ್ನ ಅಥವಾ ಕೆಟ್ಟ ಗುಣಮಟ್ಟದ ಸೇವೆಯಿಂದ ಬಳಲಿದರೆ, ಖರೀದಿ ರಸೀದಿ, ಒಪ್ಪಂದ ಪತ್ರ, ಬಿಲ್ ಮುಂತಾದ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ವಕೀಲರ ಅವಶ್ಯಕತೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರ e-Daakhil ಪೋರ್ಟಲ್ (www.edaakhil.nic.in) ಮೂಲಕ ಆನ್‌ಲೈನ್ ದೂರು ದಾಖಲಿಸುವ ವ್ಯವಸ್ಥೆಯನ್ನೂ ಮಾಡಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರೂ ನ್ಯಾಯಾಲಯವನ್ನು ಸುಲಭವಾಗಿ ಬಳಸುತ್ತಿದ್ದಾರೆ.
ನಿಮ್ಮ ದೂರು ಹೇಗಿರಬೇಕು?
ದೂರು ಸಲ್ಲಿಸುವಾಗ ಈ ವಿವರಗಳನ್ನು ಕಡ್ಡಾಯವಾಗಿ ಸೇರಿಸಬೇಕು:
ಗ್ರಾಹಕರ ಹೆಸರು ಮತ್ತು ವಿಳಾಸ.
ಮೋಸ ನಡೆದ ದಿನ, ಸಮಯ ಮತ್ತು ಸ್ಥಳದ ವಿವರ.
ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಣೆ.
ಖರೀದಿಗೆ ಸಂಬಂಧಿಸಿದ ರಸೀದಿ, ಒಪ್ಪಂದ ಪತ್ರ ಮುಂತಾದ ದಾಖಲೆಗಳು.
ತಾವು ಬಯಸುವ ಪರಿಹಾರ (ಹಣ ಹಿಂತಿರುಗಿಸಿಕೊಳ್ಳುವುದು, ಪರ್ಯಾಯ ವಸ್ತು, ದಂಡ ಇತ್ಯಾದಿ).
ಸಹಿಯೊಂದಿಗೆ ಕೋರ್ಟ್ ಶುಲ್ಕ ಸೇರಿಸಿ ಪ್ರಮಾಣಪತ್ರ ಸಲ್ಲಿಸಬೇಕು.
ಗ್ರಾಹಕರು ತಮಗೆ ಮೋಸವಾದ ದಿನದಿಂದ ಎರಡು ವರ್ಷದೊಳಗೆ ಯಾವುದೇ ಸಮಯದಲ್ಲಿ ದೂರು ಸಲ್ಲಿಸಬಹುದು.
ಪರಿಹಾರದ ವಿಧಗಳು
ಗ್ರಾಹಕರು ಕೆಳಗಿನ ರೀತಿಯ ಪರಿಹಾರವನ್ನು ಕೇಳಬಹುದು:
ಖರೀದಿಸಿದ ಮೊತ್ತದ ಜೊತೆಗೆ ಉಂಟಾದ ನಷ್ಟ ಹಾಗೂ ಕಾನೂನು ಹೋರಾಟದ ವೆಚ್ಚ.
ವಸ್ತು ಅಥವಾ ಸೇವೆಯಲ್ಲಿ ದೋಷ ಕಂಡುಬಂದರೆ ಅದನ್ನು ಸರಿಪಡಿಸಲು ಸೂಚನೆ.
ಖರೀದಿಸಿದ ವಸ್ತುವಿಗೆ ಪರ್ಯಾಯ ವಸ್ತು ಒದಗಿಸುವುದು.
ದೈಹಿಕ, ಮಾನಸಿಕ ಅಥವಾ ಆರ್ಥಿಕ ನಷ್ಟಕ್ಕೆ ಪರಿಹಾರ.
ತಪ್ಪಾದ ವಸ್ತು ಅಥವಾ ಸೇವೆಯ ಮಾರಾಟದ ಮೇಲೆ ನಿಷೇಧ.
ಸೇವೆಯನ್ನು ಅಮಾನತುಗೊಳಿಸುವುದು.
ಯಾವುದೇ ವಸ್ತು ಅಥವಾ ಸೇವೆಯನ್ನು ಖರೀದಿಸುವ ಮೊದಲು ಅದರ ಗರಿಷ್ಠ ಬೆಲೆ, ಪ್ರಮಾಣ, ತೂಕ, ಗುಣಮಟ್ಟ ಹಾಗೂ ಷರತ್ತುಗಳನ್ನು ಪರಿಶೀಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ನಿಯಮ ಉಲ್ಲಂಘನೆಯಾದರೆ ಗ್ರಾಹಕರು ಧೈರ್ಯವಾಗಿ ಪ್ರಶ್ನಿಸಿ ನ್ಯಾಯಾಲಯವನ್ನು ಸಂಪರ್ಕಿಸಬೇಕು.
ಗ್ರಾಹಕರ ನ್ಯಾಯಾಲಯ ಕೇವಲ ದೂರುಗಳನ್ನು ಬಗೆಹರಿಸುವ ವೇದಿಕೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನಿಗೂ ಭರವಸೆ ನೀಡುವ ವ್ಯವಸ್ಥೆಯಾಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರ ಹಕ್ಕುಗಳನ್ನು ಕಾಪಾಡಲು, ವ್ಯಾಪಾರಿಗಳ ಜವಾಬ್ದಾರಿಯನ್ನು ಹೆಚ್ಚಿಸಲು ಹಾಗೂ ನ್ಯಾಯವನ್ನು ತ್ವರಿತಗೊಳಿಸಲು ಈ ನ್ಯಾಯಾಲಯಗಳು ಅತ್ಯಗತ್ಯ. ಎಚ್ಚರಿಕೆಯ ಗ್ರಾಹಕರೇ ಸಮಾಜದ ಶಕ್ತಿಶಾಲಿ ಕವಚ.
📢 ಜಾಹೀರಾತಿಗಾಗಿ ಸಂಪರ್ಕಿಸಿ:
👉 ನಮ್ಮ ಸುದ್ದಿ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
📞 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

0 Comments