ಯುನೈಟೆಡ್ ಕಿಂಗ್ಡಮ್‌ನ ಪ್ರಸಿದ್ಧ ವಾಹನ ತಯಾರಿಕಾ ಕಂಪನಿ ಲಾಂಜಾಂಟೆ ಲಿಮಿಟೆಡ್ (Lanzante Limited) ತನ್ನದೇ ಆದ ಮೊದಲ ಸೂಪರ್‌ಕಾರ್ “95-59” ಅನ್ನು ಇತ್ತೀಚೆಗೆ ವಿಶ್ವಪ್ರಸಿದ್ಧ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್ 2025ರಲ್ಲಿ ಅನಾವರಣಗೊಳಿಸಿದೆ. ಆದರೆ ಈ ಕಾರಿನ ತಂತ್ರಜ್ಞಾನ, ವಿನ್ಯಾಸಕ್ಕಿಂತಲೂ ಹೆಚ್ಚು ಜನರನ್ನು ಸೆಳೆದಿರುವುದು ಅದರ ಕಂಪನಿ ಲೋಗೋದಲ್ಲಿರುವ ಶ್ರೀಗಣೇಶನ ಚಿಹ್ನೆ.
95-59” ಹೈಪರ್‌ಕಾರ್ ಶಕ್ತಿ, ವಿನ್ಯಾಸ ಮತ್ತು ತಂತ್ರಜ್ಞಾನದ ಸಮನ್ವಯ. ಮ್ಯಾಕ್ಲಾರೆನ್ P1 ಡಿಸೈನ್ ಮಾಡಿದ ಪ್ರಸಿದ್ಧ ವಿನ್ಯಾಸಕರಾದ ಪಾಲ್ ಹೌಸ್ ಇದನ್ನು ರೂಪಿಸಿದ್ದಾರೆ. ಕಾರಿನಲ್ಲಿ 850 ಎಚ್.ಪಿ. ಸಾಮರ್ಥ್ಯದ ಟ್ವಿನ್ ಟರ್ಬೋ V8 ಎಂಜಿನ್ ಅಳವಡಿಸಲಾಗಿದೆ. ಗಾಜಿನ ಛಾವಣಿ, ಮಧ್ಯದಲ್ಲಿ ಚಾಲಕನ ಸ್ಥಾನ, ಬದಿಯಲ್ಲಿ ಇಬ್ಬರು ಪ್ರಯಾಣಿಕರಿಗೆ ಸೀಟು ಹಾಗೂ ಎಫ್-22 ಫೈಟರ್ ಜೆಟ್ ಶೈಲಿಯ ಎಕ್ಸಾಸ್ಟ್ ವ್ಯವಸ್ಥೆ ಈ ಕಾರಿಗೆ ವಿಶೇಷ ಆಕರ್ಷಣೆ ನೀಡಿದೆ.
ಲಕ್ಸುರಿ ಸೂಪರ್‌ಕಾರ್ ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಾಗಿರುವ ಈ ಕಾರು ಕೇವಲ 59 ಯೂನಿಟ್‌ಗಳು ಮಾತ್ರ ತಯಾರಾಗಲಿದ್ದು, ಪ್ರತಿಯೊಂದರ ಬೆಲೆ ಸುಮಾರು ₹12–₹12.5 ಕೋಟಿ (1.38 ಮಿಲಿಯನ್ ಯೂರೋ) ಇರಲಿದೆ.
ಗಣೇಶನ ಲೋಗೋ ಹಿಂದೆ ಕಥೆ
ಲಾಂಜಾಂಟೆ ಲಿಮಿಟೆಡ್ ತನ್ನ ಲೋಗೋದಲ್ಲಿ ಗಣಪತಿ ಬಪ್ಪನ ಆಕೃತಿ ಬಳಸಿರುವುದು ಅಚ್ಚರಿಯ ಸಂಗತಿ. ಆದರೆ ಇದರ ಹಿಂದೆ ಅರ್ಥಪೂರ್ಣ ಕಥೆಯಿದೆ. ಪ್ರಸಿದ್ಧ ಬ್ರಿಟಿಷ್ ಸಂಗೀತ ತಂಡ ಬೀಟಲ್ಸ್ ಸದಸ್ಯ ಜಾರ್ಜ್ ಹರಿಸನ್ ಭಾರತೀಯ ಆಧ್ಯಾತ್ಮಿಕತೆಯ ದೊಡ್ಡ ಅಭಿಮಾನಿಯಾಗಿದ್ದು, ಗಣಪತಿಯನ್ನು "ಅಡಚಣೆಗಳನ್ನು ನಿವಾರಿಸುವ ದೇವರು" ಎಂದು ಗೌರವಿಸುತ್ತಿದ್ದರು. ಅವರ ಸಲಹೆಯ ಮೇರೆಗೆ ಲಾಂಜಾಂಟೆ ಕಂಪನಿಯ ಸಂಸ್ಥಾಪಕ ಪಾಲ್ ಲಾಂಜಾಂಟೆ ಗಣೇಶನ ಲೋಗೋವನ್ನು ತಮ್ಮ ಕಂಪನಿ ಚಿಹ್ನೆಯಾಗಿ ಅಳವಡಿಸಿಕೊಂಡರು.
ಈ ಲೋಗೋ ಕೇವಲ ಕಾರಿನ ಮೇಲಷ್ಟೇ ಅಲ್ಲ, ಕಂಪನಿಯ ಕಚೇರಿಗಳು ಮತ್ತು ಇತರೆ ಸೌಲಭ್ಯಗಳಲ್ಲಿಯೂ ಕಾಣಬಹುದು. ಇದರಿಂದ ಲಾಂಜಾಂಟೆ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದೆ
ಭಾರತೀಯ ಸಂಸ್ಕೃತಿಯ ಸಂಕೇತವಾದ ಶ್ರೀ ಗಣೇಶ ಮತ್ತು ಬ್ರಿಟಿಷ್ ಸೂಪರ್‌ಕಾರ್ ತಂತ್ರಜ್ಞಾನಗಳ ಈ ಅನಿರೀಕ್ಷಿತ ಸಂಯೋಜನೆ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕರು “ಈ ಕಾರು ನನಗೆ ಇಷ್ಟವಾಯಿತು ಏಕೆಂದರೆ ಇದರ ಲೋಗೋದಲ್ಲಿ ಶ್ರೀ ಗಣೇಶನಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
“ಲಾಂಜಾಂಟೆ 95-59” ಕೇವಲ ಒಂದು ಸೂಪರ್‌ಕಾರ್ ಅಲ್ಲ. ಇದು ಭಾರತೀಯ ಆಧ್ಯಾತ್ಮಿಕತೆ ಮತ್ತು ಪಾಶ್ಚಾತ್ಯ ಇಂಜಿನಿಯರಿಂಗ್‌ನ ಅನನ್ಯ ಸಂಯೋಜನೆ. ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಾಗುತ್ತಿರುವುದರಿಂದ, ಇದು ಕಲೆಕ್ಷನ್ ಕಾರ್ ಆಗಿ ಭವಿಷ್ಯದಲ್ಲಿ ಇನ್ನಷ್ಟು ಮೌಲ್ಯ ಪಡೆಯುವ ಸಾಧ್ಯತೆಯಿದೆ.

0 Comments