ಅಮೆರಿಕ ಪ್ರಜೆಗಳಿಗೆ 'ಡಿಜಿಟಲ್ ಅರೆಸ್ಟ್' ಬೆದರಿಕೆ: ನಕಲಿ ಬಿಪಿಒ ವಂಚನೆ ಗ್ಯಾಂಗ್ ಪತ್ತೆ, 16 ಜನರ ಬಂಧನ

 

Ad
ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಕಲಿ ಬಿಪಿಒ (BPO) ಸಂಸ್ಥೆಯ ಸೋಗಿನಲ್ಲಿ ಭಾರೀ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಗ್ಯಾಂಗ್‌ ಒಂದನ್ನು ನಗರ ಪೊಲೀಸರು ಪತ್ತೆಹಚ್ಚಿ, ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿಯನ್ನು ಬಂಧಿಸಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ನ 27ನೇ ಮುಖ್ಯರಸ್ತೆಯಲ್ಲಿರುವ ಕಚೇರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ವಂಚಕರ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದರು. ದಾಳಿಯ ವೇಳೆ 40ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಮತ್ತು ಅನೇಕ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಅವರು ಸ್ವಯಂ ಪ್ರೇರಿತ ದೂರು (ಸು ಮೊಟೋ) ದಾಖಲಿಸಿ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಮುಂದುವರಿಸಿದ್ದಾರೆ.

Ad


ಪೊಲೀಸ್ ಅಧಿಕಾರಿಗಳ ಸೋಗು:

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಂಧಿತರು 'ಸಿಬಿಟ್ಸ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್' ಎಂಬ ಹೆಸರಿನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಕಲಿ ಬಿಪಿಒ ಸಂಸ್ಥೆಯನ್ನು ಸ್ಥಾಪಿಸಿದ್ದರು. ಕಟ್ಟಡದ ಎರಡು ಮಹಡಿಗಳಲ್ಲಿ ಸುಮಾರು 25 ಮಂದಿ ಯುವಕರು ಮತ್ತು ಯುವತಿಯರನ್ನು ನೇಮಿಸಿ, ವಿದೇಶಿ ಪ್ರಜೆಗಳಿಗೆ ಕರೆ ಮಾಡಿ ವಂಚಿಸುವ ತರಬೇತಿ ನೀಡಲಾಗುತ್ತಿತ್ತು.

ಈ ತಂಡದ ಸದಸ್ಯರು ರಾತ್ರಿ ವೇಳೆಯಲ್ಲಿ ಅಮೆರಿಕ ಸೇರಿದಂತೆ ವಿದೇಶಗಳ ನಾಗರಿಕರಿಗೆ ಪೊಲೀಸ್ ಅಥವಾ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುತ್ತಿದ್ದರು. "ನಿಮ್ಮ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದೆ" ಎಂದು ಬೆದರಿಸಿ, 'ಡಿಜಿಟಲ್ ಅರೆಸ್ಟ್' ಮಾಡುವ ಭಯ ಹುಟ್ಟಿಸುತ್ತಿದ್ದರು. ನಂತರ "ನಾವು ನಿಮಗೆ ಕಾನೂನು ರಕ್ಷಣೆ ನೀಡುತ್ತೇವೆ" ಎಂಬ ನೆಪದಲ್ಲಿ ಹಣ ವರ್ಗಾಯಿಸಲು ಒತ್ತಡ ಹೇರುತ್ತಿದ್ದರು.

ನಕಲಿ ದಾಖಲೆಗಳ ಬಳಕೆ:

ಈ ವಂಚನೆಗಾಗಿ ಆರೋಪಿಗಳು ಯುಎಸ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಯುಎಸ್ ಪೋಸ್ಟಲ್ ಸರ್ವಿಸ್, ಹಾಗೂ ಯುಎಸ್ ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್‌ನಂತಹ ಪ್ರತಿಷ್ಠಿತ ಅಮೆರಿಕನ್ ಸಂಸ್ಥೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದರು. ನಕಲಿ ಗುರುತಿನ ಚೀಟಿಗಳು, ಸುಳ್ಳು ಅರೆಸ್ಟ್ ವಾರಂಟ್‌ಗಳು ಹಾಗೂ ಲೈವ್ ಸರ್ವರ್‌ಗಳ ಮೂಲಕ ನಿಜವಾದ ಕಚೇರಿಯಂತೆಯೇ ವಾತಾವರಣ ನಿರ್ಮಿಸಿ ಅಮೆರಿಕನ್ ಪ್ರಜೆಗಳನ್ನು ವ್ಯವಸ್ಥಿತವಾಗಿ ವಂಚಿಸುತ್ತಿದ್ದರು.

ಬಂಧಿತ 16 ಮಂದಿಯಲ್ಲಿ ಮಹಾರಾಷ್ಟ್ರದ 8 ಮಂದಿ, ಮೇಘಾಲಯದ 4 ಮಂದಿ, ಹಾಗೂ ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಒಬ್ಬರು ಆರೋಪಿಗಳು ಸೇರಿದ್ದಾರೆ.

ವಶಪಡಿಸಿಕೊಂಡಿರುವ ಕಂಪ್ಯೂಟರ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ಫೋರೆನ್ಸಿಕ್ ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ವಂಚನೆಗೆ ಸಂಬಂಧಿಸಿದ ಹಣ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments