ಮೈಸೂರಿನಲ್ಲಿ ಅಕ್ಟೋಬರ್ 17 ರಂದು ಆಯೋಜಿಸಲಾಗಿರುವ ಬೃಹತ್ ಉದ್ಯೋಗ ಮೇಳದಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು ಭಾಗವಹಿಸಿ, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಡೆದ 'ಮೈಸೂರಿನ ಬೃಹತ್ ಉದ್ಯೋಗ ಮೇಳ/ಯುವ ಸಮೃದ್ಧಿ ಸಮ್ಮೇಳನ'ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
198 ಕಂಪನಿಗಳ ಭಾಗಿ:
ಈ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 198 ಕಂಪನಿಗಳು ಭಾಗವಹಿಸುತ್ತಿವೆ. ಜಿಲ್ಲೆಯಲ್ಲಿ 'ಯುವನಿಧಿ' ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ 6,347 ನಿರುದ್ಯೋಗಿಗಳು ಕಡ್ಡಾಯವಾಗಿ ಈ ಮೇಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಉದ್ಯೋಗ ಮೇಳದ ಕುರಿತು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕಾಲೇಜುಗಳಲ್ಲಿ ಪೋಸ್ಟರ್ ಅಂಟಿಸಬೇಕು ಮತ್ತು ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬೇಕು ಎಂದು ಸೂಚಿಸಿದರು. ಇದಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳು ನೋಂದಾಯಿಸಿಕೊಳ್ಳುವಂತೆ ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ಜಿಲ್ಲಾದ್ಯಂತ ಪ್ರಚಾರ ಮಾಡಲು ಸಲಹೆ ನೀಡಿದರು.
ಸಂದರ್ಶನ ಎದುರಿಸಲು ತರಬೇತಿ:
ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡ ಜಿಲ್ಲೆಯ ನಿರುದ್ಯೋಗಿಗಳಿಗೆ ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಅಗತ್ಯ ಕೌಶಲಗಳು ಹಾಗೂ ಸಂದರ್ಶನವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗನಂದ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗೀತಾ, ನಗರಾಭಿವೃದ್ಧಿ ಕೋಶ ಇಲಾಖೆಯ ಯೋಜನಾ ನಿರ್ದೇಶಕ ಟಿ.ಎನ್. ನರಸಿಂಹಮೂರ್ತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕಚೇರಿಯ ಜಂಟಿ ನಿರ್ದೇಶಕ ದಿನೇಶ್, ನಗರಸಭೆ ಪೌರಾಯುಕ್ತೆ ಯ.ಪಿ. ಪಂಪಶ್ರೀ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments