ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರ ಮೇಲೆ ಜೇನುನೊಣಗಳ ಹಿಂಡು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶನಿವಾರ ಬಂಟ್ವಾಳ ತಾಲ್ಲೂಕಿನ ಸಜೀಪದ ಶಾರದಾ ನಗರ ಭಜನಾ ಮಂದಿರದ ಬಳಿ ಸಂಭವಿಸಿದೆ.
ಗಾಯಗೊಂಡವರು ಸಜೀಪಮೂಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೆಂಕಟರಮಣ. ಅವರು ಗಾಯಗೊಂಡ ನಂತರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 9 ಗಂಟೆಯ ಸಮಯದಲ್ಲಿ ಗಣತಿ ಕಾರ್ಯಕ್ಕಾಗಿ ಮನೆ ಮನೆಗೆ ತೆರಳುತ್ತಿದ್ದಾಗ, ಒಂದು ಮನೆಯ ಕೆಲಸ ಮುಗಿಸಿ ಇನ್ನೊಂದು ಮನೆ ಕಡೆ ಹೋಗುತ್ತಿದ್ದ ವೇಳೆ ಏಕಾಏಕಿ ಜೇನುನೊಣಗಳ ಹಿಂಡು ದಾಳಿ ಮಾಡಿತು. ಕೆಲ ಹೊತ್ತು ಸಮೀಪದ ಮನೆಯಲ್ಲಿ ಆಶ್ರಯ ಪಡೆದರೂ, ನಂತರ ಸ್ಕೂಟರ್‌ನಲ್ಲಿ ಹೊರಟಾಗ ಮತ್ತೆ ನೊಣಗಳು ಹಿಂಬಾಲಿಸಿವೆ.
ಸುಮಾರು 2 ಕಿಲೋಮೀಟರ್‌ಗಳಷ್ಟು ದೂರದವರೆಗೆ ಹಿಂಬಾಲಿಸಿ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಕುಟುಕುಗಳು ಬಿದ್ದಿವೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದರು. “ಅಪಾಯದಿಂದ ಪಾರಾದರೂ ನೋವು ಹೆಚ್ಚು ಇದೆ,” ಎಂದು ವೆಂಕಟರಮಣ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ಪ್ರಭಾರ ಶಿಕ್ಷಣಾಧಿಕಾರಿ ಬಬಿತಾ ಹಾಗೂ ಇತರ ಅಧಿಕಾರಿಗಳು ಶಿಕ್ಷಕರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.


0 Comments