ಬರುವ ನವೆಂಬರ್ 1 ರಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದು ಜಾರಿಗೆ ಬರಲಿದೆ. ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳಿಗೆ ಸಂಬಂಧಿಸಿದ ನಾಮಿನಿ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದ್ದು, ಇನ್ಮುಂದೆ ಗ್ರಾಹಕರು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ನಾಮಿನಿಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ನಾಲ್ಕು ನಾಮಿನಿಗೆ ಅವಕಾಶ:
ಈವರೆಗೆ ಒಂದು ಬ್ಯಾಂಕ್ ಖಾತೆ ಅಥವಾ ಲಾಕರ್‌ಗೆ ಕೇವಲ ಒಬ್ಬ ನಾಮಿನಿಯನ್ನು ಮಾತ್ರ ನೇಮಿಸಲು ಅವಕಾಶವಿತ್ತು. ಆದರೆ, ನೂತನ ನಿಯಮದ ಅಡಿಯಲ್ಲಿ, ಇನ್ನು ಮುಂದೆ ಗ್ರಾಹಕರು ತಮ್ಮ ಖಾತೆ ಅಥವಾ ಲಾಕರ್‌ಗೆ ನಾಲ್ಕು ಮಂದಿಯವರೆಗೆ ನಾಮಿನಿಗಳನ್ನು ಆಯ್ಕೆ ಮಾಡಬಹುದಾಗಿದೆ.
ಈ ಕ್ರಮವು ಕ್ಲೈಮ್ ಸೆಟಲ್‌ಮೆಂಟ್ (ಹಣಕಾಸು ಇತ್ಯರ್ಥ) ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲಿದೆ. ಠೇವಣಿ ಮಾಡುವ ಸಂದರ್ಭದಲ್ಲೇ ಖಾತೆದಾರರು ಈ ನಾಲ್ಕು ನಾಮಿನಿಗಳನ್ನು ಆಯ್ಕೆ ಮಾಡಬಹುದು.
ಹಣ ವರ್ಗಾವಣೆಗೆ ಸುಲಭ ಮಾರ್ಗ:
ಖಾತೆದಾರರು ಮೃತರಾದ ನಂತರ, ಈ ನಾಮಿನಿಗಳಲ್ಲಿ ಕ್ರಮ ಸಂಖ್ಯೆಗೆ (Order of Preference) ಅನುಗುಣವಾಗಿ, ಅವರು ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗುತ್ತಾರೆ. ಇದರಿಂದಾಗಿ ಯಾವುದೇ ಗೊಂದಲಗಳಿಲ್ಲದೆ, ಖಾತೆಯಲ್ಲಿರುವ ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ಮತ್ತು ಸುಲಭವಾಗಿ ವರ್ಗಾವಣೆ ಆಗಲು ಅವಕಾಶ ಸಿಗಲಿದೆ.
ನವೆಂಬರ್ 1 ರಿಂದ ಜಾರಿ:
ಕೇಂದ್ರ ಹಣಕಾಸು ಇಲಾಖೆ ನೀಡಿರುವ ಮಾಹಿತಿಯಂತೆ, 'ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯಿದೆ-2025' ನವೆಂಬರ್ 1 ರಿಂದ ಜಾರಿಗೆ ಬರಲಿದ್ದು, ಬ್ಯಾಂಕ್ ಗ್ರಾಹಕರು ಈ ಹೊಸ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.


0 Comments