ಕಳೆದ ಆರು ತಿಂಗಳ ಹಿಂದೆ ಬಹು ನಿರೀಕ್ಷೆಯೊಂದಿಗೆ ಆರಂಭಗೊಂಡ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಸೇವೆ ಇದೀಗ ನಿತ್ಯ ಪ್ರಯಾಣಿಕರ ಪಾಲಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಸಾವಿರಾರು ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಮುಖ್ಯ ಆಸರೆಯಾಗಿದ್ದ ಈ ರೈಲು, ಕಳೆದ ಕೆಲವು ದಿನಗಳಿಂದ ಪದೇ ಪದೇ ಸಮಯಪಾಲನೆಯಲ್ಲಿ ಎಡವುತ್ತಿದ್ದು, ರೈಲ್ವೆ ಇಲಾಖೆಯ ವಿರುದ್ಧ ಪ್ರಯಾಣಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ಯೋಗಿಗಳಿಗೆ ಸಂಕಷ್ಟ:
ಪ್ರತಿದಿನ ಬೆಳಗ್ಗೆ ಸುಬ್ರಹ್ಮಣ್ಯದಿಂದ 7 ಗಂಟೆಗೆ ಹೊರಡುವ ಈ ರೈಲು, ಮಂಗಳೂರನ್ನು ನಿಗದಿತ 9:30ಕ್ಕೆ ತಲುಪಬೇಕಿದೆ. ಆದರೆ, ಇತ್ತೀಚೆಗೆ 15 ರಿಂದ 20 ನಿಮಿಷಗಳಷ್ಟು ತಡವಾಗಿ ತಲುಪುತ್ತಿರುವುದರಿಂದ 9:30ಕ್ಕೆ ಕಚೇರಿ ತಲುಪಬೇಕಾದ ಉದ್ಯೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಇರುವ ಕಡೆಗಳಲ್ಲಿ ತಡವಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲಾಗದೆ ಬೇಸತ್ತ ಹಲವು ಪ್ರಯಾಣಿಕರು ಮಂಗಳೂರು ಜಂಕ್ಷನ್‌ನಲ್ಲಿ (ಕಂಕನಾಡಿ) ಇಳಿದು, ಅನಗತ್ಯವಾಗಿ ದುಬಾರಿ ಆಟೋ ಅಥವಾ ಬಸ್ ದರ ನೀಡಿ ಕಚೇರಿ ತಲುಪುತ್ತಿದ್ದಾರೆ. ಇದರಿಂದ ಅವರ ಮೇಲೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳಿಗಾಗಿ ಕಾಯಿಸುವುದು ವಿಳಂಬಕ್ಕೆ ಕಾರಣ:
ರೈಲು ವಿಳಂಬಕ್ಕೆ ಬೆಂಗಳೂರಿನಿಂದ ಬರುವ ಎಕ್ಸ್‌ಪ್ರೆಸ್ ರೈಲುಗಳಿಗೆ ದಾರಿ ಮಾಡಿಕೊಡಲು ಪ್ಯಾಸೆಂಜರ್ ರೈಲನ್ನು ಅನಗತ್ಯವಾಗಿ ಎಲ್ಲೆಂದರಲ್ಲಿ ನಿಲ್ಲಿಸುವುದೇ ಪ್ರಮುಖ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಜೆ ವೇಳೆಯ ಪ್ರಯಾಣದಲ್ಲಿ ನೇರಳಕಟ್ಟೆ ನಿಲ್ದಾಣದಲ್ಲಿ ಗೂಡ್ಸ್ ರೈಲುಗಳಿಗಾಗಿ ಕೂಡಾ ಪ್ಯಾಸೆಂಜರ್ ರೈಲನ್ನು ಕಾಯಿಸಲಾಗುತ್ತದೆ. "ಪ್ಯಾಸೆಂಜರ್ ರೈಲಿಗಿಂತ ಗೂಡ್ಸ್ ರೈಲು ಮುಖ್ಯವೇ?" ಎಂದು ಪ್ರಶ್ನಿಸಿರುವ ಪ್ರಯಾಣಿಕರು, ಆನ್‌ಲೈನ್‌ನಲ್ಲಿ ದೂರು ನೀಡಿದರೆ 'ತಾಂತ್ರಿಕ ಕಾರಣ' ಎಂಬ ಸಿದ್ಧ ಉತ್ತರ ನೀಡಿ ರೈಲ್ವೆ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ಸಮಯ ಬದಲಾವಣೆಯ ಬೇಡಿಕೆಗೂ ಸ್ಪಂದಿಸದ ಇಲಾಖೆ:
ಸಂಜೆ ಮಂಗಳೂರಿನಿಂದ 5:45ಕ್ಕೆ ಹೊರಡುವ ರೈಲಿನ ಸಮಯವನ್ನು 6 ಗಂಟೆಗೆ ಬದಲಾಯಿಸಿದರೆ ಕಚೇರಿಯಿಂದ ಹಿಂದಿರುಗುವವರಿಗೆ ಅನುಕೂಲವಾಗುತ್ತದೆ ಎಂಬ ಬೇಡಿಕೆಯನ್ನೂ ರೈಲ್ವೆ ಇಲಾಖೆ ಈಡೇರಿಸಿಲ್ಲ. "ನಿಗದಿತ ಸಮಯವನ್ನೇ ಪಾಲಿಸದ ಇಲಾಖೆ, ಹೊಸ ಬೇಡಿಕೆಗೆ ಹೇಗೆ ಸ್ಪಂದಿಸುತ್ತದೆ?" ಎಂಬುದು ಪ್ರಯಾಣಿಕರ ಅಳಲಾಗಿದೆ. ಪುತ್ತೂರು, ಕಾಣಿಯೂರು, ಎಡಮಂಗಲ ಸೇರಿದಂತೆ ಸುತ್ತಮುತ್ತಲಿನ ನೂರಾರು ಜನರು ಈ ರೈಲನ್ನೇ ಅವಲಂಬಿಸಿದ್ದು, ರೈಲ್ವೆ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಸಮಯ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments