ಕಾರ್ಕಳ: ಪ್ರೀತಿಸುವ ನಾಟಕವಾಡಿ ಯುವತಿಯೊಬ್ಬಳು ಮತ್ತು ಆಕೆಯ ತಂಡ ಬ್ಲಾಕ್‌ಮೇಲ್ ಹಾಗೂ ಹನಿಟ್ರ್ಯಾಪ್ ಮಾಡಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕಾರ್ಕಳದ ಬೆಳ್ಮಣ್ ಲಾಡ್ಜ್‌ನಲ್ಲಿ ನಡೆದಿದೆ.
ಮೃತನನ್ನು ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಬಯೋ ಮೆಡಿಕಲ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಬರೆದಿಟ್ಟಿರುವ ಏಳು ಪುಟಗಳ ಸುದೀರ್ಘ ಮರಣ ಪತ್ರ ಪೊಲೀಸರ ಕೈಸೇರಿದ್ದು, ಇದರಲ್ಲಿ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನು ಮತ್ತು ಅವರು ನಡೆಸಿದ ಕಿರುಕುಳವನ್ನು ಸ್ಪಷ್ಟವಾಗಿ ದಾಖಲಿಸಿದ್ದಾನೆ.
ಡೆತ್ ನೋಟ್‌ನಲ್ಲೇನಿದೆ?
'ಸ್ವಾಮಿ ಕೊರಗಜ್ಜ' ಎಂದು ಪತ್ರವನ್ನು ಆರಂಭಿಸಿರುವ ಅಭಿಷೇಕ್, ತನ್ನ ಸಾವಿಗೆ ಲೇಡಿಗೋಷನ್ ಆಸ್ಪತ್ರೆಯ ವಾರ್ಡ್ ನರ್ಸ್ ಆಗಿರುವ ನಿರೀಕ್ಷಾ ಮತ್ತು ಆಕೆಯ ಗೆಳೆಯರಾದ ಗುರುಪುರ ಕೈಕಂಬ ನಿವಾಸಿ ರಾಕೇಶ್, ಕಂಕನಾಡಿ ನಿವಾಸಿ ರಾಹುಲ್ ಹಾಗೂ ಗುರುಪುರ ಕೈಕಂಬದ ತಸ್ಲಿಂ ಎಂಬುವವರು ಕಾರಣ ಎಂದು ಉಲ್ಲೇಖಿಸಿದ್ದಾನೆ.
ಬ್ಲಾಕ್‌ಮೇಲ್ ಕಿರುಕುಳ:
ನಿರೀಕ್ಷಾ ನನ್ನನ್ನು ಪ್ರೀತಿಸುವ ನಾಟಕವಾಡಿ ಹತ್ತಿರವಾದಳು. ಬಿಕರ್ನಕಟ್ಟೆಯ ನಮ್ಮ ರೂಮಿನಲ್ಲಿ ಗುಪ್ತ ಕ್ಯಾಮರಾದಲ್ಲಿ ನನ್ನ ಆಪ್ತ ವಿಡಿಯೋಗಳನ್ನು ಚಿತ್ರೀಕರಿಸಿದಳು.
ಈ ಅಶ್ಲೀಲ ವಿಡಿಯೋ ಮುಂದಿಟ್ಟು ಭಾರೀ ಕಿರುಕುಳ ನೀಡಿದ್ದಾರೆ. ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ನಿರೀಕ್ಷಾ ನನ್ನ ರೀತಿಯಲ್ಲೇ ಸಾಕಷ್ಟು ಮಂದಿಯ ನಗ್ನ ವಿಡಿಯೋಗಳನ್ನು ಹೊಂದಿದ್ದಳು. ಆಕೆಯ ಗೆಳತಿಯರ ಡ್ರೆಸ್ ಚೇಂಜ್ ಮಾಡುವ ವಿಡಿಯೋ ಕೂಡ ಇತ್ತು. ಅದನ್ನು ತಸ್ಲಿಂ ಮೂಲಕ ವಿದೇಶಕ್ಕೆ ಕಳಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಳು. ಇದರ ದಾಖಲೆ ನನ್ನ ಮೊಬೈಲ್‌ನಲ್ಲಿದೆ ಎಂದು ಪತ್ರದಲ್ಲಿ ವಿನಂತಿಸಿದ್ದಾನೆ.
ಹಣಕ್ಕಾಗಿ ಪೀಡನೆ, ಜೀವ ಬೆದರಿಕೆ:
ಆರೋಪಿಗಳು ಹಲವು ಬಾರಿ ಹಣ ಕೇಳಿ ಪಡೆದಿದ್ದಾರೆ. ಈವರೆಗೆ 3 ರಿಂದ 4 ಲಕ್ಷ ರೂಪಾಯಿ ನೀಡಿದ್ದೇನೆ. ಹಣ ಕೊಟ್ಟು ಸಾಕಾಗಿದೆ, ಪೊಲೀಸ್ ದೂರು ಕೊಡುತ್ತೇನೆ ಎಂದಾಗ, ರಾಕೇಶ್, ರಾಹುಲ್ ಮತ್ತು ತಸ್ಲಿಂ ಸೇರಿ ವಾಮಂಜೂರಿನಲ್ಲಿ ತೀವ್ರ ಹಲ್ಲೆ ನಡೆಸಿದ್ದಾರೆ. ಮರ್ಮಾಂಗಕ್ಕೆ ತುಳಿದು ಹಣಕ್ಕಾಗಿ ಪೀಡಿಸಿದ್ದಾರೆ.
ದೂರು ನೀಡಿದರೆ, 'ನೀನೇ ರೇಪ್ ಮಾಡಿದ್ದಾಗಿ ಮರು ದೂರು ಕೊಟ್ಟು ನಿನ್ನನ್ನೇ ಸಿಲುಕಿಸುತ್ತೇವೆ' ಎಂದು ಬೆದರಿಕೆ ಹಾಕುತ್ತಿದ್ದರು.
ನಿರೀಕ್ಷಾ ತನ್ನನ್ನು ಎಸ್‌ಸಿ-ಎಸ್‌ಟಿ ಎಂದು ಹೇಳಿಕೊಂಡು, 'ಕಾನೂನು ನಮ್ಮ ಪರವಾಗಿಯೇ ಇದೆ, ಏಕೆಂದರೆ ಕಾನೂನು ಮಾಡಿದ್ದೇ ನಮ್ಮವರು' ಎಂದು ಬೆದರಿಸಿದ್ದಾಳೆ.
ಇವರು ಸಾಯುವವರೆಗೂ ನನ್ನನ್ನು ಬಿಡುವುದಿಲ್ಲ ಎಂದು ಗೊತ್ತಾಗಿತ್ತು. 20 ಲಕ್ಷ ಕೊಟ್ಟರೆ ಬಿಟ್ಟು ಬಿಡುತ್ತೇವೆ ಎಂದು ಹೇಳಿದ್ದರು. ನನ್ನ ಕುಟುಂಬವನ್ನು ಮಿಸ್ ಮಾಡುತ್ತಿದ್ದೇನೆ. ಬೇರೆ ದಾರಿಯಿಲ್ಲದೆ ಸಾಯುತ್ತಿದ್ದೇನೆ ಎಂದು ಅಭಿಷೇಕ್ ತನ್ನ ನೋವು ತೋಡಿಕೊಂಡಿದ್ದಾನೆ.
ಮೊಬೈಲ್ ವಶಕ್ಕೆ ಪಡೆದು ತನಿಖೆ-ಎಸ್ಪಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು, "ಅಭಿಷೇಕ್ ನಿರೀಕ್ಷಾಳನ್ನು ಪ್ರೀತಿಸಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ. ಮರಣ ಪತ್ರದಲ್ಲಿ ಉಲ್ಲೇಖವಾಗಿರುವ ಮೂವರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಅವರ ಮೊಬೈಲ್ ಸೀಜ್ ಮಾಡಿ ತನಿಖೆ ನಡೆಸಲಾಗುತ್ತಿದೆ. ನಾವು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತೇವೆ. ಆರೋಪದ ಬಗ್ಗೆ ಸಾಕ್ಷ್ಯ ಕಂಡುಬಂದರೆ ಬಂಧಿಸುತ್ತೇವೆ" ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಯುವಕನ ನಾಪತ್ತೆ ಪ್ರಸ್ತಾಪ:
ಡೆತ್ ನೋಟ್‌ನಲ್ಲಿ ನಿರೀಕ್ಷಾ ಈ ಹಿಂದೆ ತನ್ನ ಗೆಳೆಯ ತೇಜಕುಮಾರ್‌ನೊಂದಿಗೆ ನಡೆದುಕೊಂಡ ರೀತಿ ಮತ್ತು ಬ್ಲಾಕ್‌ಮೇಲ್ ಯತ್ನವನ್ನು ಉಲ್ಲೇಖಿಸಿದ್ದಾನೆ. ತೇಜಕುಮಾರ್ ನಾಪತ್ತೆಗೆ ಸಂಬಂಧಿಸಿದಂತೆ ಆತನ ತಂದೆ-ತಾಯಿಗೆ ಈ ವಿಷಯ ತಿಳಿಸದೇ ಇದ್ದುದಕ್ಕೆ ಅಭಿಷೇಕ್ ಕ್ಷಮೆ ಕೇಳಿರುವುದು ಪತ್ರದಲ್ಲಿ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ
ಸಾಮಾಜಿಕ ಜಾಲತಾಣಗಳ ಈ ಆಕ್ರೋಶದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹನಿಟ್ರ್ಯಾಪ್ ಮತ್ತು ಬ್ಲಾಕ್‌ಮೇಲ್ ಮಾಫಿಯಾಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಲಾಗಿದೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

0 Comments