ಮಂಗಳೂರು: ಅಂಗಡಿಗೆ ಹೋಗುತ್ತಿದ್ದ 9 ವರ್ಷದ ಬಾಲಕಿಯ ಮೇಲೆ ಬೀದಿನಾಯಿಗಳ ಹಿಂಡು ಮಾರಣಾಂತಿಕವಾಗಿ ದಾಳಿ ಮಾಡಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕಾನ ಮೈದಗುರಿಯಲ್ಲಿ ನಡೆದಿದೆ.
ಮೈದಗುರಿ ನಿವಾಸಿ ಹೈದರ್ ಅಲಿ ಅವರ ಪುತ್ರಿ ರಿದಾ ಫಾತಿಮ (9) ದಾಳಿಯಿಂದ ಗಾಯಗೊಂಡ ಬಾಲಕಿ. ಆಕೆ ಪ್ರಸ್ತುತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬುಧವಾರ ಸಂಜೆ ರಿದಾ ಫಾತಿಮ ಮನೆ ಬಳಿಯ ಅಂಗಡಿಗೆ ತೆರಳುತ್ತಿದ್ದಳು. ಇದೇ ಸಮಯದಲ್ಲಿ, ಜಗಳವಾಡಿಕೊಂಡು ಬಂದ ಬೀದಿನಾಯಿಗಳ ಹಿಂಡು ರಿದಾಳ ಬಳಿ ಬಂದಿವೆ. ನಾಯಿಗಳ ಜಗಳ ಕಂಡು ಹೆದರಿದ ಬಾಲಕಿ, ಮನೆಗೆ ಹಿಂದಿರುಗಿ ಓಡಲು ಯತ್ನಿಸಿದ್ದಾಳೆ. ಈ ವೇಳೆ ಆಕೆಯ ಕೈಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಬಿದ್ದ ಹಣವನ್ನು ಹೆಕ್ಕಲು ಬಾಗಿದ ತಕ್ಷಣ, ನಾಯಿಗಳ ಹಿಂಡು ದಿಢೀರನೆ ಬಾಲಕಿಯ ಮೇಲೆ ದಾಳಿ ನಡೆಸಿವೆ.
ದಾಳಿಯ ತೀವ್ರತೆಗೆ ಬಾಲಕಿಯ ಕೈ ಮತ್ತು ಕಾಲುಗಳ ಮೇಲೆ ಗಂಭೀರವಾದ ಕಚ್ಚಿದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸಾರ್ವಜನಿಕರಿಂದ ರಕ್ಷಣೆ, ಆಸ್ಪತ್ರೆಗೆ ದಾಖಲು:
ಬಾಲಕಿ ರಿದಾಳ ಬೊಬ್ಬೆ ಕೇಳಿ ಕೂಡಲೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು, ನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದರು. ತಕ್ಷಣವೇ ಆಕೆಯನ್ನು ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ, ನಂತರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಬಾಲಕಿಗೆ ಗಂಭೀರ ಗಾಯಗಳಾಗಿರುವುದರಿಂದ ಆಕೆಯ ಆರೋಗ್ಯದ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಬೀದಿ ನಾಯಿಗಳ ಹಾವಳಿ ಮತ್ತು ನಿಯಂತ್ರಣದ ಬಗ್ಗೆ ಸ್ಥಳೀಯರಲ್ಲಿ ಮತ್ತೆ ಆತಂಕ ಮೂಡಿಸಿದೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

.jpg)
0 Comments