ಸರ್ಕಾರಿ ಶಾಲೆಗಳ ಮಹತ್ವದ ಬದಲಾವಣೆ: ರಾಜ್ಯದ 474 ಶಾಲೆಗಳು ಇನ್ಮುಂದೆ 'ಕರ್ನಾಟಕ ಪಬ್ಲಿಕ್ ಶಾಲೆ' (ಕೆಪಿಎಸ್)!

 

Ad
ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಕ್ರಾಂತಿಗೆ ನಾಂದಿ ಹಾಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯಾದ್ಯಂತ ಒಟ್ಟು 474 ಸರ್ಕಾರಿ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ' (KPS) ಗಳಾಗಿ ಉನ್ನತೀಕರಿಸಲು ಆದೇಶ ಹೊರಡಿಸಲಾಗಿದೆ. ಈ ನಿರ್ಧಾರದಿಂದಾಗಿ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಹಂತದವರೆಗೆ ಒಂದೇ ಸೂರಿನಡಿ ಸಮಗ್ರ ಶಿಕ್ಷಣ ಒದಗಿಸುವ ಗುರಿ ಈಡೇರಲಿದೆ.

ಶಿಕ್ಷಣ ಇಲಾಖೆಯ ಈ ಆದೇಶವು 2025-26 ಮತ್ತು 2026-27 ರ ಶೈಕ್ಷಣಿಕ ಸಾಲಿನಲ್ಲಿ ಜಾರಿಗೆ ಬರಲಿದ್ದು, ರಾಜ್ಯ ಆಯವ್ಯಯದ ಅನುದಾನ ಹಾಗೂ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಸಾಲ ಯೋಜನೆಯಡಿ ಹಣಕಾಸು ಒದಗಿಸಲಾಗುವುದು.

Ad


ಹಿನ್ನೆಲೆ ಮತ್ತು ಸವಾಲುಗಳು:

ರಾಜ್ಯದಲ್ಲಿ ಪ್ರಸ್ತುತ 47,493 ಸರ್ಕಾರಿ ಶಿಕ್ಷಣ ಸಂಸ್ಥೆಗಳಿದ್ದರೂ, ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಸಂಯುಕ್ತ ವ್ಯವಸ್ಥೆ ಹೊಂದಿರುವ ಶಾಲೆಗಳು ಕೇವಲ 309 ಮಾತ್ರ ಇವೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು 2015-16 ರಲ್ಲಿ ಶೇ. 46 ಇದ್ದದ್ದು, 2025-26ರಲ್ಲಿ ಶೇ. 38.2ಕ್ಕೆ ಇಳಿದಿದೆ. 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸಣ್ಣ ಸರ್ಕಾರಿ ಶಾಲೆಗಳ ಸಂಖ್ಯೆ 25,683ಕ್ಕೆ ಏರಿದೆ.

ಪ್ರೌಢಶಾಲಾ ಹಂತದಲ್ಲಿ ಡ್ರಾಪ್‌ಔಟ್ ದರ ಶೇ. 22.88ರಷ್ಟು ಅಧಿಕವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಕಡಿಮೆ ಮಾಡಲು, ಒಂದೇ ಆವರಣದಲ್ಲಿ ಪ್ರಾಥಮಿಕ ಹಂತದಿಂದ ಪದವಿ ಪೂರ್ವದವರೆಗೆ (LKG ಯಿಂದ 12ನೇ ತರಗತಿ) ಶಿಕ್ಷಣ ನೀಡುವ ಸಂಯುಕ್ತ ಕೆಪಿಎಸ್ ಮಾದರಿಯು ಅತ್ಯಂತ ಸೂಕ್ತ ಎಂದು ಸರ್ಕಾರ ತೀರ್ಮಾನಿಸಿದೆ. 2018-19 ರಲ್ಲಿ ಆರಂಭವಾದ ಕೆಪಿಎಸ್ ಮಾದರಿ ಶಾಲೆಗಳಲ್ಲಿ ಸರಾಸರಿ ದಾಖಲಾತಿ 819ಕ್ಕೆ ಏರಿದ್ದು, ಉತ್ತಮ ಫಲಿತಾಂಶ ದಾಖಲಿಸಿದೆ.

ಯೋಜನೆ ಮತ್ತು ಸೌಲಭ್ಯಗಳು:

ಈ ಹೊಸ ಯೋಜನೆ ಮೂಲಕ ಸಣ್ಣ ಗಾತ್ರದ ಶಾಲೆಗಳನ್ನು ಸಂಯುಕ್ತಗೊಳಿಸಿ, ಪ್ರತಿ ಕೆಪಿಎಸ್ ಶಾಲೆಯಲ್ಲಿ ಕನಿಷ್ಠ 1200 ರಿಂದ ಗರಿಷ್ಠ 1800 ವಿದ್ಯಾರ್ಥಿಗಳಿಗೆ ಸೌಕರ್ಯ ಒದಗಿಸುವ ಗುರಿ ಹೊಂದಲಾಗಿದೆ.

ಪ್ರಮುಖ ಸೌಲಭ್ಯಗಳು:

 * ದ್ವಿಭಾಷಾ ಬೋಧನೆ ಮತ್ತು ತರಬೇತಿ: ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಮಾಧ್ಯಮ ಬೋಧನೆ ಇರುತ್ತದೆ. 1ನೇ ತರಗತಿಯಿಂದಲೇ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗುವುದು.

 * ಗುಣಮಟ್ಟದ ಸುಧಾರಣೆ: ಮೂಲಭೂತ ಸೌಕರ್ಯಗಳ ನವೀಕರಣ, ಕ್ರಿಯಾಶೀಲ ಕಲಿಕೆ, ವೃತ್ತಿಪರ ತರಬೇತಿ, STEAM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ, ಗಣಿತ) ಶಿಕ್ಷಣ ಮತ್ತು AI ಸಂಪನ್ಮೂಲಗಳನ್ನು ಅಳವಡಿಸಲಾಗುವುದು.

 * ಅನುದಾನ: ಪ್ರತಿ ಕೆಪಿಎಸ್ ಶಾಲೆಗೆ ಮೂಲಭೂತ ಸೌಕರ್ಯಗಳಿಗಾಗಿ ₹2 ರಿಂದ ₹4 ಕೋಟಿ ಅನುದಾನ ನೀಡಲು ಉದ್ದೇಶಿಸಲಾಗಿದೆ.

 * ಉಚಿತ ಸಾರಿಗೆ: ಕೆಪಿಎಸ್ ಶಾಲೆಗೆ 5 ಕಿ.ಮೀ. ವ್ಯಾಪ್ತಿಯ ಊರುಗಳಿಂದ ಬರುವ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

 * ಆಡಳಿತಾತ್ಮಕ ಸುಧಾರಣೆ: ಕೆಪಿಎಸ್ ಶಾಲೆಗಳಿಗೆ ಒಂದೇ UDISE ಕೋಡ್ ಮತ್ತು ಬ್ಯಾಂಕ್ ಖಾತೆ, SDMC ಮೂಲಕ ನಿರ್ವಹಣೆ, ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ರಚನೆ ಮುಂತಾದ ಆಡಳಿತಾತ್ಮಕ ಸುಧಾರಣೆಗಳನ್ನು ತರಲಾಗುವುದು.

 * ಶಿಕ್ಷಕರ ನಿಯೋಜನೆ: ಶಿಕ್ಷಕರ ನಿರಂತರತೆಗಾಗಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ, ತರಬೇತಿ ಮತ್ತು ಹತ್ತು ವರ್ಷಗಳ ಸ್ಥಿರ ಸೇವೆಯನ್ನು ಖಾತರಿಪಡಿಸಲಾಗುವುದು.

ಪ್ರಾದೇಶಿಕ ಆದ್ಯತೆ:

ಪ್ರಾದೇಶಿಕ ಸಮಾನತೆಯನ್ನು ಕಾಯ್ದುಕೊಳ್ಳಲು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನಿಧಿಯಡಿ 200 ಶಾಲೆಗಳನ್ನು ಕೆಪಿಎಸ್ ಆಗಿ ಉನ್ನತೀಕರಿಸಲಾಗುವುದು. ಜೊತೆಗೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2 ರಿಂದ 3 ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ 4 ರಿಂದ 5 ಶಾಲೆಗಳನ್ನು ಕೆಪಿಎಸ್‌ಗಳಾಗಿ ರೂಪಿಸಲಾಗುವುದು.

ಒಟ್ಟಾರೆ, ಈ ಮಹತ್ವಾಕಾಂಕ್ಷೆಯ ಯೋಜನೆಯು ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿ, ಎಲ್ಲ ವರ್ಗದ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ನೀಡಲು ಬಲವಾದ ಮಾನದಂಡವನ್ನು ಸ್ಥಾಪಿಸಲಿದೆ ಎಂದು ಸರ್ಕಾರ ತಿಳಿಸಿದೆ. ಇನ್ನು ಮುಂದೆ ನವೆಂಬರ್ ತಿಂಗಳಿಂದಲೇ ಕೆಪಿಎಸ್ ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳಿಗೂ ದಾಖಲಾತಿ ಆಂದೋಲನ ನಡೆಸಲು ನಿರ್ಧರಿಸಲಾಗಿದೆ.

(ಆದಿಲ್ ಸಂಖ್ಯೆ ಇಪಿ 64 ಎಂಪಿಇ 2024 ದಿನಾಂಕ 15.10.2025 ರಂದು ಈ ಆದೇಶ ಹೊರಡಿಸಲಾಗಿದೆ)


Post a Comment

0 Comments