ಮಂಗಳೂರು: ಮಂಗಳೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬದ ವ್ಯಕ್ತಿ ಸೇರಿ ಮೂವರನ್ನು ಮಂಗಳೂರಿನ ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಆಕಾಶಭವನ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಮತ್ತು ಕಡಬ ತಾಲೂಕು ಬೆಳಂದೂರು ಗ್ರಾಮದ ಅಬ್ದುಲ್ ರಮೀಝ್ (33) ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಹಾರೀಫ್ ಅಬೂಬಕ್ಕರ್ ಅಕ್ಟೋಬರ್ 9ರಂದು ಕಾವೂರು ಬಳಿಯ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 6.24 ಲಕ್ಷ ರೂ. ಸಾಲ ಪಡೆದಿದ್ದ. ಚಿನ್ನದ ಬಗ್ಗೆ ಸಂಶಯ ಬಂದ ಕಾರಣ ತಪಾಸಣೆಗೆ ಒಳಪಡಿಸಿದಾಗ ಅದು ನಕಲಿ ಎಂದು ದೃಢಪಟ್ಟಿತ್ತು. ಈ ಬಗ್ಗೆ ಕಾವೂರು ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ಲಕ್ಷ ರೂ. ನಗದು, ಸುಮಾರು 45 ಗ್ರಾಂ. ತೂಕದ ನಕಲಿ ಚಿನ್ನದ ಒಡವೆಗಳು, 20 ಲಕ್ಷ ರೂ. ಮೌಲ್ಯದ ಕಾರು ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ 26.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ, ಎ.ಎಸ್.ಐ. ಚಂದ್ರಹಾಸ ಸನೀಲ್, ಎಚ್.ಸಿ. ಗಳಾದ ಸಂಬಾಜಿ ಕದಂ, ಕೆಂಚನ್ ಗೌಡ, ಪ್ರಮೋದ್ ಕುಮಾರ್ ಮತ್ತು ಪಿ.ಸಿ. ಗಳಾದ ನಾಗರಾಜ್ ಬೈರಗೊಂಡ, ಪ್ರವೀಣ್, ರಿಯಾಝ್, ತೀರ್ಥಪ್ರಸಾದ್, ಆನಂದ್ ಅವರು ಇದ್ದರು.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp
.jpg)
.jpg)
0 Comments