ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಲಿದ್ದಾರೆ. ಅಂದರೆ ಚಾಂಪಿಯನ್ಸ್ ಟ್ರೋಫಿಯ ಬಳಿಕ ರೋಕೊ ಜೋಡಿ ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡಿಲ್ಲ. ಇದೀಗ ಆಸೀಸ್ ಸರಣಿಯ ಮೂಲಕ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಕೊಹ್ಲಿ ಹಾಗೂ ರೋಹಿತ್ ಸಜ್ಜಾಗಿದ್ದಾರೆ. ಈ ಸಜ್ಜಾಗುವಿಕೆಯ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಸರಣಿ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಇದೀಗ ಬಿಸಿಸಿಐ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ಆಸ್ಟ್ರೇಲಿಯಾ ಸರಣಿಯು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ‘ಕೊನೆಯ’ ಸರಣಿಯಾಗಲಿದೆ ಎಂಬ ಹೇಳಿಕೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿರಸ್ಕರಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಅವರ ಉಪಸ್ಥಿತಿಯು ತಂಡಕ್ಕೆ ‘ಪ್ರಯೋಜನ’ ನೀಡುತ್ತದೆ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಲು ಸಹಾಯ ಮಾಡುತ್ತದೆ. ನಿವೃತ್ತಿ ಯಾವಾಗಲೂ ಆಟಗಾರರ ಆಯ್ಕೆಯಾಗಿರುತ್ತದೆ, ಮಂಡಳಿಯ ಆಯ್ಕೆಯಲ್ಲ ಎಂದು ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಇದಾಗ್ಯೂ 2027 ರ ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಅವರ ವಯಸ್ಸು 40 ವರ್ಷ ಆಗಿರಲಿದೆ. ಹೀಗಾಗಿಯೇ ಇತ್ತೀಚೆಗೆ ಏಕದಿನ ತಂಡದ ನಾಯಕತ್ವವನ್ನು ಶುಭ್ಮನ್ ಗಿಲ್ಗೆ ನೀಡಲಾಗಿದೆ.
ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಸರಣಿಯ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದಿಂದ ಕೈ ಬಿಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಇದೀಗ ಅಂತಹ ಯಾವುದೇ ಆಲೋಚನೆಗಳಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಹೇಳಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟ್ಸ್‌ಮನ್‌ಗಳು. ಅವರನ್ನು ತಂಡದಲ್ಲಿಟ್ಟುಕೊಂಡು ನಾವು ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೇವೆ. ಇದು ಅವರ ಕೊನೆಯ ಏಕದಿನ ಸರಣಿ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು. ಅವರು ಯಾವಾಗ ನಿವೃತ್ತರಾಗಬೇಕು ಎಂಬುದು ಅವರ ಮೇಲೆ ಅವಲಂಬಿತವಾಗಿರುತ್ತದೆ.
ಆಸ್ಟ್ರೇಲಿಯಾ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಲಾಸ್ಟ್ ಸಿರೀಸ್ ಎಂಬುದೆಲ್ಲಾ ಕೇವಲ ವದಂತಿ. ನಿವೃತ್ತಿ ಎಂಬುದು ಆಟಗಾರರಿಗೆ ಬಿಟ್ಟಂತಹ ವಿಷಯ. ಇದರಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ ಪಾತ್ರವಿರುವುದಿಲ್ಲ ಎಂದು ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ

.jpg)
0 Comments