ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಸಾವಿರಾರು ಟನ್ ಆಹಾರ ಧಾನ್ಯಗಳು ಸರಿಯಾದ ನಿರ್ವಹಣೆ ಇಲ್ಲದೆ ಹುಳು ಹಿಡಿದು ಸಂಪೂರ್ಣವಾಗಿ ಹಾಳಾಗಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ದಾವಣಗೆರೆಯ ಎಪಿಎಂಸಿ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಗೋದಾಮಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ (Lokayukta Raid) ನಡೆಸಿದಾಗ ಈ ಬೇಜವಾಬ್ದಾರಿತನ ಬಯಲಾಗಿದೆ.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರಿ ಅವರ ನೇತೃತ್ವದ ತಂಡವು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ದಾಳಿಯ ವೇಳೆ, 2500 ಟನ್ ಸಾಮರ್ಥ್ಯದ ಗೋದಾಮಿನಲ್ಲಿ ಧಾನ್ಯಗಳನ್ನು ಅಸ್ತವ್ಯಸ್ತವಾಗಿ ಸಂಗ್ರಹಿಸಿರುವುದು ಕಂಡುಬಂದಿದೆ. ಅವುಗಳಲ್ಲಿ ಬಹುತೇಕ ಧಾನ್ಯಗಳು 2023ರ ಏಪ್ರಿಲ್‌ನಿಂದಲೂ ಸಂಗ್ರಹವಾಗಿದ್ದವು. ಸುದೀರ್ಘ ಕಾಲದ ಸಂಗ್ರಹಣೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಅಕ್ಕಿ ಮತ್ತು ಗೋಧಿ ಧಾನ್ಯಗಳಲ್ಲಿ ಹುಳು ಬಂದು ಸಂಪೂರ್ಣವಾಗಿ ಕೊಳೆತು ಹೋಗಿವೆ. ಬಡವರ ಪಾಲಿನ ಆಹಾರ ಧಾನ್ಯಗಳು ಗೋದಾಮಿನಲ್ಲಿ ಹುಳುಗಳಿಗೆ ಆಹಾರವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಿರ್ಲಕ್ಷ್ಯಕ್ಕೆ ಆಹಾರ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಬಿ.ಎಸ್. ಅವರ ಬೇಜವಾಬ್ದಾರಿತನವೇ ಕಾರಣ ಎಂದು ಹೇಳಲಾಗಿದೆ. ಅಧಿಕಾರಿಗಳ ಈ ಘೋರ ನಿರ್ಲಕ್ಷ್ಯದಿಂದಾಗಿ ಬಡವರ ಹೊಟ್ಟೆ ತುಂಬಿಸಬೇಕಾದ ಆಹಾರ ಧಾನ್ಯಗಳು ಗೋದಾಮಿನಲ್ಲೇ ಹಾಳಾಗಿ ಹೋಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

.jpg)
0 Comments