ಬೆಂಗಳೂರು ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು: ಪ್ರೇಯಸಿ ನಾಪತ್ತೆ, ಸಾವಿಗೆ ಕಾರಣವೇನು?

 

Ad
ಬೆಂಗಳೂರು: ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ 'ಗ್ಯಾಂಡ್ ಚಾಯ್ಸ್' ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು ಪ್ರಕರಣವು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪುತ್ತೂರು ಮೂಲದ ತಕ್ಷಿತ್ (20) ಎಂಬ ಯುವಕ, ತನ್ನ ಪ್ರೇಯಸಿ ವಿರಾಜಪೇಟೆಯ ರಕ್ಷಿತಾ ಅವರೊಂದಿಗೆ ಸತತ ಎಂಟು ದಿನಗಳ ಕಾಲ ಲಾಡ್ಜ್‌ನಲ್ಲಿ ತಂಗಿದ್ದು, ಒಂಬತ್ತನೇ ದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಆದರೆ, ಯುವತಿ ರಕ್ಷಿತಾ ಮಾತ್ರ ನಾಪತ್ತೆಯಾಗಿದ್ದಾಳೆ.

Ad


ಪೊಲೀಸ್ ಮೂಲಗಳ ಪ್ರಕಾರ, ತಕ್ಷಿತ್ ಮತ್ತು ರಕ್ಷಿತಾ ಅವರು ಅಕ್ಟೋಬರ್ 9ರಂದು ಬೆಂಗಳೂರಿಗೆ ಆಗಮಿಸಿ, 'ಕಾಲೇಜು ಸಂಬಂಧಿತ ಕೆಲಸ' ಎಂದು ಹೇಳಿ ಲಾಡ್ಜ್‌ಗೆ ಚೆಕ್‌ಇನ್ ಮಾಡಿದ್ದರು. ಇಬ್ಬರೂ ಹೊರಗಿನಿಂದ ಆಹಾರವನ್ನು ತರಿಸಿಕೊಂಡು ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆಹಾರ ಸೇವನೆ ನಂತರ ಅಸ್ವಸ್ಥತೆ

ತನಿಖಾ ಮೂಲಗಳ ಮಾಹಿತಿ ಪ್ರಕಾರ, ಅಕ್ಟೋಬರ್ 17ರ ರಾತ್ರಿ ಇಬ್ಬರೂ ಸ್ವಿಗ್ಗಿಯಿಂದ ಆಹಾರ ಆರ್ಡರ್ ಮಾಡಿ ಸೇವಿಸಿದ್ದಾರೆ. ಆ ಬಳಿಕ ಇಬ್ಬರಿಗೂ ಅಸ್ವಸ್ಥತೆ ಉಂಟಾದ ಹಿನ್ನೆಲೆಯಲ್ಲಿ, ಮೆಡಿಕಲ್ ಸ್ಟೋರ್‌ನಿಂದ ಮಾತ್ರೆಗಳನ್ನು ತಂದು ಸೇವಿಸಿದ್ದಾರೆ.

ಮರುದಿನ ಬೆಳಿಗ್ಗೆ, ತಕ್ಷಿತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆದರೆ, ಲಾಡ್ಜ್‌ನ ರೂಮಿನಿಂದ ರಕ್ಷಿತಾ ನಾಪತ್ತೆಯಾಗಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿದ ಲಾಡ್ಜ್ ಸಿಬ್ಬಂದಿ, "ಇಬ್ಬರೂ ಅಕ್ಟೋಬರ್ 9ರಂದು ಚೆಕ್‌ಇನ್ ಮಾಡಿಕೊಂಡಿದ್ದರು. ನಿಯಮಿತವಾಗಿ ಪಾವತಿ ಮಾಡುತ್ತಿದ್ದರು. ನಿನ್ನೆ ರಾತ್ರಿ ಯುವಕ ಮೃತಪಟ್ಟಿರುವ ವಿಷಯ ಬೆಳಿಗ್ಗೆ ತಿಳಿಯಿತು," ಎಂದು ಮಾಹಿತಿ ನೀಡಿದ್ದಾರೆ.

ಯುಡಿಆರ್ ದಾಖಲು, ತನಿಖೆ ಆರಂಭ

ಮಡಿವಾಳ ಪೊಲೀಸರು ಈ ಪ್ರಕರಣವನ್ನು ಯುಡಿಆರ್ (ಅಸ್ವಾಭಾವಿಕ ಸಾವು ವರದಿ) ಅಡಿಯಲ್ಲಿ ದಾಖಲಿಸಿಕೊಂಡಿದ್ದು, ಯುವಕನ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ನಾಪತ್ತೆಯಾದ ರಕ್ಷಿತಾಳ ಹುಡುಕಾಟದಲ್ಲಿದ್ದಾರೆ. ತಕ್ಷಿತ್‌ನ ಸಾವಿನ ಹಿಂದೆ ಆಹಾರದ ಅಸ್ವಸ್ಥತೆ ಇದೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.


Post a Comment

0 Comments