ಪುತ್ತೂರು: ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಈ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎ.ಎಸ್.ಐ.) ಚಿದಾನಂದ ರೈ ಮತ್ತು ಸಿಪಿಸಿ 2283 ಶ್ರೀ ಶೈಲ ಎಂ.ಕೆ. ಎಂಬವರನ್ನು ಕರ್ತವ್ಯದಿಂದ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಘಟನೆ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಟೋ ಚಾಲಕ ಬಶೀರ್ ಎಂಬವರು ಸಮವಸ್ತ್ರ ಧರಿಸದೆ ಆಟೋ ಚಲಾಯಿಸಿಕೊಂಡು ಬರುತ್ತಿದ್ದಾಗ, ಪೊಲೀಸರು ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಚಾಲಕ ವಾಹನ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿ ಮೋಟಾರ್ ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲಕನನ್ನು ಹಿಂಬಾಲಿಸಿ ತಡೆದ ಪೊಲೀಸರು, ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎಸ್ಪಿ ಕಚೇರಿಯಿಂದ ಸ್ಪಷ್ಟನೆ:
ವೈರಲ್ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ವಿಡಿಯೋದಲ್ಲಿ ಕಂಡುಬಂದಂತೆ ಇಬ್ಬರು ಪೊಲೀಸರ ಕೃತ್ಯವು ತಪ್ಪು ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ. ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಈ ಮೊದಲು ತಿಳಿಸಲಾಗಿತ್ತು. ಅದರಂತೆ, ಇದೀಗ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.
ಪೊಲೀಸರ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

.jpg)
0 Comments