ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಲಯವು ಹುಬ್ಬಳ್ಳಿ-ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿಯು ಈ ಕ್ರಮವನ್ನು ಸ್ವಾಗತಿಸಿದೆ.
ದಿನಾಂಕ 17/10/2025 ಶುಕ್ರವಾರ ರೈಲು ಸಂಖ್ಯೆ 07353 ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4:00ಕ್ಕೆ ಹೊರಟು ಅದೇ ದಿನ ರಾತ್ರಿ 11:25ಕ್ಕೆ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ ದಿನಾಂಕ 18/10/2025 ಶನಿವಾರ ಬೆಳಗ್ಗೆ 11:15ಕ್ಕೆ ಮಂಗಳೂರಿನ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ದಿನ ಅಂದರೆ ದಿನಾಂಕ 18/10/2025 ಶನಿವಾರ ರೈಲು ಸಂಖ್ಯೆ 07354 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2:35ಕ್ಕೆ ಹೊರಟು ರಾತ್ರಿ 11:25ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ಮಂಗಳೂರು ಜಂಕ್ಷನ್ ಹಾಗು ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ,ಶ್ರೀ ಮಹಾದೇವಪ್ಪ ಮಲ್ಲಾರ ಹಾವೇರಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಜೊತೆಗೆ ದಿನಾಂಕ 19/10/2025 ಆದಿತ್ಯವಾರದಂದು ರೈಲು ಸಂಖ್ಯೆ 06229 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು ರಾತ್ರಿ 12:15ಕ್ಕೆ ಹೊರಟು ಅದೇ ದಿನ ಬೆಳಗ್ಗೆ 11:15ಕ್ಕೆ ಮಂಗಳೂರಿನ ಮಂಗಳೂರು ಜಂಕ್ಷನ್ ತಲುಪಲಿದೆ. ಅದೇ ದಿನ ರೈಲು ಸಂಖ್ಯೆ 06230 ಮಂಗಳೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2:35ಕ್ಕೆ ಹೊರಟು ರಾತ್ರಿ 12:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ರೈಲಿಗೆ ಮಂಗಳೂರು ಜಂಕ್ಷನ್ ಹಾಗು ಬೆಂಗಳೂರು ಕಂಟೋನ್ಮೆಂಟ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಈ ವಿಶೇಷ ರೈಲುಗಳು ಎಸಿ ಪ್ರಥಮ, ದ್ವಿತೀಯ, ತೃತೀಯ ದರ್ಜೆ, ಸ್ಲೀಪರ್ ಮತ್ತು ಜನರಲ್ ಕೋಚ್‌ಗಳನ್ನು ಒಳಗೊಂಡಿದ್ದು, ಬಂಟ್ವಾಳ, ಸುಬ್ರಹ್ಮಣ್ಯ ರೋಡ್, ಹಾಸನ, ತುಮಕೂರು, ದಾವಣಗೆರೆ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ. ಹಬ್ಬದ ಸಮಯದಲ್ಲಿ ಊರಿಗೆ ಪ್ರಯಾಣಿಸುವವರು ಈ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಮಿತಿ ಮನವಿ ಮಾಡಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments