ಜಾತಿವಾರು ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಶವ ಕೆರೆಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

 

Ad
ಜಾತಿವಾರು ಸಮೀಕ್ಷೆ ಕಾರ್ಯಕ್ಕೆ ತೆರಳಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶಿಕ್ಷಕಿಯ ಮೃತದೇಹ ಬುಧವಾರ ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಸಮೀಪದ ಅಯ್ಯಪ್ಪಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಇರಬಹುದೆಂದು ಶಂಕೆ ವ್ಯಕ್ತವಾಗಿದೆ.

ಅಖ‌ರ್ ಬೇಗಂ (ಹೆಸರು) ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆ ಕಾರ್ಯದ ಭಾಗವಾಗಿ ನರಸಾಪುರ ಗ್ರಾಮಕ್ಕೆ ನಿಯೋಜನೆಗೊಂಡಿದ್ದರು. ಸೋಮವಾರ ಬೆಳಿಗ್ಗೆ ಸಮೀಕ್ಷೆಗೆ ತೆರಳಿದ ನಂತರ ಅವರು ಸಂಪರ್ಕಕ್ಕೆ ಸಿಗದೇ ಇದ್ದರು. ಅವರು ತಮ್ಮ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು, ಕೇವಲ ಗುರುತಿನ ಚೀಟಿಯೊಂದಿಗೆ ತೆರಳಿದ್ದರು ಎಂಬ ಮಾಹಿತಿ ಇದೆ.

Ad

ಶಿಕ್ಷಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಕೋಲಾರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಕುಟುಂಬದವರು ಮತ್ತು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.

ಬುಧವಾರ ಮಧ್ಯಾಹ್ನ ಅಯ್ಯಪ್ಪಳ್ಳಿ ಕೆರೆಯಲ್ಲಿ ಶವ ತೇಲಾಡುತ್ತಿರುವುದು ಕಂಡುಬಂದಿದೆ. ಕೆರೆಯ ದಡದಲ್ಲಿ ಮೃತ ಶಿಕ್ಷಕಿಯ ಬ್ಯಾಗ್‌ ಮತ್ತು ಬಸ್ ಟಿಕೆಟ್ ಸಹ ಪತ್ತೆಯಾಗಿದ್ದು, ಇದು ಪ್ರಕರಣದ ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸಹೋದ್ಯೋಗಿಗಳಿಂದ ಒತ್ತಡದ ಮಾಹಿತಿ:

ಸಮೀಕ್ಷೆಯ ಒತ್ತಡ, ಸುತ್ತಾಟ ಮತ್ತು ಅಧಿಕ ಕೆಲಸದ ಒತ್ತಡದಿಂದಾಗಿ ಶಿಕ್ಷಕಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸಹೋದ್ಯೋಗಿಗಳಿಂದ ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ.

ಅಖ‌ರ್ ಬೇಗಂ ಅವರು ಈ ಹಿಂದೆ ಬೇತಮಂಗಲ ಹೋಬಳಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. "ಬೇತಮಂಗಲ ಕೆರೆಗಳು ತುಂಬಿವೆ, ಹೋಗಿ ನೋಡಬೇಕು" ಎಂದು ಇತ್ತೀಚೆಗೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ.

ಈ ಸಂಬಂಧ ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಮುಂದುವರೆಸಿದ್ದಾರೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments