ಅಲೆಕ್ಕಾಡಿ-ಎಡಮಂಗಲ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರ: ರೈಲು ಪ್ರಯಾಣಕ್ಕೆ ವಿಳಂಬದ ಆತಂಕ

 

Ad
ಸುಳ್ಯ: ಅಲೆಕ್ಕಾಡಿಯಿಂದ ಎಡಮಂಗಲ ರೈಲ್ವೆ ಗೇಟ್‌ಗೆ ಸಂಪರ್ಕ ಕಲ್ಪಿಸುವ ಸುಮಾರು 5 ಕಿ.ಮೀ. ಉದ್ದದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ತೀರಾ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ದುಸ್ತರವಾಗಿದೆ. ರಸ್ತೆಯಲ್ಲಿರುವ ದೊಡ್ಡ ದೊಡ್ಡ ಹೊಂಡಗಳಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
Ad

Ad


ಈ ರಸ್ತೆಯಲ್ಲಿ ವಾಹನಗಳ ಸಂಚಾರ ಮಾತ್ರವಲ್ಲದೆ, ಜನಸಾಮಾನ್ಯರೂ ನಡೆದಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾಮಕ್ಕಳಿಗೂ ಈಗ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಎಡಮಂಗಲ ರೈಲ್ವೆ ಗೇಟ್ ಮೂಲಕ ಪ್ರಯಾಣಿಸಬೇಕಾದ ರೈಲು ಪ್ರಯಾಣಿಕರು, ರಸ್ತೆಯ ದುಸ್ಥಿತಿಯಿಂದಾಗಿ ನಿಗದಿತ ಸಮಯಕ್ಕೆ ಗೇಟ್‌ ತಲುಪಲು ಕಷ್ಟಪಡುತ್ತಿದ್ದಾರೆ. ಒಂದು ವೇಳೆ ತಡವಾದರೆ ರೈಲು ಸಂಚರಿಸುವ ಕಾರಣ ಗೇಟ್ ಹಾಕಲಾಗುತ್ತದೆ, ಇದರಿಂದ ಪ್ರಯಾಣಿಕರು ರೈಲು ತಪ್ಪಿಸಿಕೊಳ್ಳುವ ಅಥವಾ ಅನಗತ್ಯ ವಿಳಂಬ ಎದುರಿಸುವಂತಾಗಿದೆ.

Ad


ಅಲೆಕ್ಕಾಡಿಯಿಂದ ಎಡಮಂಗಲ ತಲುಪಬೇಕಾದ ವಾಹನ ಸವಾರರು ಹೊಂಡಗಳನ್ನು ತಪ್ಪಿಸಲು ಪ್ರತಿದಿನ ಹರಸಾಹಸ ಪಡಬೇಕಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹೊಂಡಗಳಲ್ಲಿ ನೀರು ತುಂಬಿರುವುದರಿಂದ, ರಸ್ತೆಯು ಕೆಸರುಮಯವಾಗಿ ಇನ್ನಷ್ಟು ಅಪಾಯಕಾರಿಯಾಗಿದೆ.

ಕಾಂಕ್ರೀಟಿಕರಣಕ್ಕೆ ಒತ್ತಾಯ:

ಹೊಂಡಗಳನ್ನು ಕೇವಲ ಮಣ್ಣು ತುಂಬಿಸಿ ಮುಚ್ಚುವ ಬದಲು, ಶಾಶ್ವತ ಪರಿಹಾರವಾಗಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದರೆ ಜನ ಮತ್ತು ವಾಹನ ಸಂಚಾರಕ್ಕೆ ಬಹಳ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

 ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಈ ಊರಿನ ಸ್ಥಳೀಯರು ಆಗಿದ್ದು, ಈ ಕುರಿತು ಸಂಬಂಧಿಸಿದ ಲೋಕೋಪಯೋಗಿ ಇಲಾಖೆಗೆ ತಕ್ಷಣ ಸೂಚನೆ ನೀಡಿ ಕನಿಷ್ಠ ಪಕ್ಷ ಗುಂಡಿ ಮುಚ್ಚುವ ಕೆಲಸವನ್ನಾದರೂ ತುರ್ತಾಗಿ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಕ್ರಿಯಾ ಯೋಜನೆಯಲ್ಲಿ ಈ ಪ್ರಮುಖ ರಸ್ತೆಯನ್ನು ಸಂಪೂರ್ಣವಾಗಿ ಮರು ಡಾಮರೀಕರಣಗೊಳಿಸಿ ಸಂಚಾರಕ್ಕೆ ಯೋಗ್ಯವಾಗಿಸಬೇಕು ಎಂಬುದು ಅಲೆಕ್ಕಾಡಿ ಮತ್ತು ಎಡಮಂಗಲ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದೆ. ಈ ಸಮಸ್ಯೆ ಇಲಾಖೆಯ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿಯಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments