ಪುತ್ತೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು 131 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪುತ್ತೂರು ನಿವಾಸಿ ಅಪೂರ್ವ ಕೆ. ಭಟ್ (32) ಅವರು ಇತ್ತೀಚೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದೀಗ ಅದೇ ಅಪಘಾತದಲ್ಲಿ ಗಾಯಗೊಂಡಿದ್ದ ಅವರ ತಂದೆ ಈಶ್ವರ ಭಟ್ (70) ಸಹ ಇಂದು ನಿಧನರಾಗಿದ್ದಾರೆ. ಪುತ್ತೂರಿನಲ್ಲಿ ಸಂಭವಿಸಿದ್ದ ಭೀಕರ ಬಸ್-ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ತಂದೆ ಅಂಡೆಪುಣಿ ಈಶ್ವರ ಭಟ್ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ನಂತರ ಬಿಡುಗಡೆಗೊಂಡು ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುತ್ತಿದ್ದರು. ಇದೀಗ ತಂದೆ-ಮಗಳು ಇಬ್ಬರೂ ಅಪಘಾತದ ದುರಂತಕ್ಕೆ ಬಲಿಯಾಗಿದ್ದು, ಕುಟುಂಬದಲ್ಲಿ ಆಳವಾದ ಶೋಕ ಆವರಿಸಿದೆ.
ದುರಂತದ ಹಿನ್ನೆಲೆ: ಈ ದುರ್ಘಟನೆ ಮೇ 27 ರಂದು ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ನಡೆದಿತ್ತು. ಬೆಂಗಳೂರಿನಲ್ಲಿದ್ದ ಅಪೂರ್ವ ಅವರು ಶ್ರಾದ್ಧ ಕಾರ್ಯ ನಿಮಿತ್ತ ಪುತ್ತೂರಿಗೆ ಬಂದು, ಬಸ್ ನಿಲ್ದಾಣದಿಂದ ತಮ್ಮ ತಂದೆ ಈಶ್ವರ ಭಟ್ ಅವರೊಂದಿಗೆ ವ್ಯಾಗನರ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪಡ್ನರಿಗೆ ತಿರುಗುವ ಒಳರಸ್ತೆಯಲ್ಲಿ ಈ ಘಟನೆ ಸಂಭವಿಸಿತ್ತು. ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ 'MERCY' ಹೆಸರಿನ ಖಾಸಗಿ ಬಸ್, ಈಶ್ವರ ಭಟ್ ಚಲಾಯಿಸುತ್ತಿದ್ದ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು.
ಅಪಘಾತದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನುಜ್ಜುಗುಜ್ಜಾಗಿತ್ತು. ಈ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದರು. ಅದೃಷ್ಟವಶಾತ್, ಕಾರಿನಲ್ಲಿದ್ದ ಅಪೂರ್ವ ಅವರ ಮಗಳು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದರು. ಆ ದಿನದಿಂದಲೂ ಚಿಕಿತ್ಸೆ ಪಡೆಯುತ್ತಿದ್ದ ಅಪೂರ್ವ ಮತ್ತು ಈಶ್ವರ ಭಟ್ ಅವರು ಇದೀಗ ಕೆಲವೇ ದಿನಗಳ ಅಂತರದಲ್ಲಿ ನಿಧನರಾಗಿದ್ದು, ಪುತ್ತೂರು ಮತ್ತು ಕುಟುಂಬದವರಲ್ಲಿ ತೀವ್ರ ನೋವುಂಟುಮಾಡಿದೆ.

0 Comments