ಪರಿಸರ ಜಾಗೃತಿಗಾಗಿ ಕಾರವಾರದಿಂದ ಮಂಗಳೂರುವರೆಗೆ 'ಹಸಿರು ನಡಿಗೆ': 300 ಕಿ.ಮೀ. ಪಾದಯಾತ್ರೆ ಪೂರ್ಣ

 

Ad
ಮಂಗಳೂರು: 'ಎಲ್ಲೆಂದರಲ್ಲಿ ಕಸ ಎಸೆಯಬಾರದು' ಎಂಬ ಸಂದೇಶವನ್ನು ಹೊತ್ತು ಈ ಹಿಂದೆ ಉಳ್ಳಾಲದ ನೇತ್ರಾವತಿ ಸೇತುವೆ ಹಾಗೂ ಅಡ್ಯಾರ್ ಬಳಿ ಏಕಾಂಗಿಯಾಗಿ ನಿಂತು ಜನಜಾಗೃತಿ ಮೂಡಿಸಿದ್ದ ಪರಿಸರ ಪ್ರೇಮಿ, ಹಸಿರು ದಳದ ನಾಗರಾಜ್ ಬಜಾಲ್ ಅವರು ಇದೀಗ ಘನತ್ಯಾಜ್ಯ ನಿರ್ವಹಣೆ ಕುರಿತು ಮಹತ್ವದ ಹೆಜ್ಜೆಯಿಟ್ಟಿದ್ದಾರೆ. 'ಹಸಿರು ನಡಿಗೆ ಪ್ರತಿ ಹೆಜ್ಜೆ ಸ್ವಚ್ಛತೆಯಡೆಗೆ' ಎಂಬ ಧೈಯವಾಕ್ಯದೊಂದಿಗೆ ನಾಗರಾಜ್ ಅವರು ಕಾರವಾರದಿಂದ ಮಂಗಳೂರಿನವರೆಗೆ ಏಕಾಂಗಿ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಕ್ಟೋಬರ್ 27ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಚಾಲನೆ ನೀಡಿದ ಈ ನಡಿಗೆ, ನಿನ್ನೆ (ರವಿವಾರ) ಮಧ್ಯಾಹ್ನ ಮಂಗಳೂರಿನಲ್ಲಿ ಅಂತ್ಯಗೊಂಡಿದೆ. ಅವರು ಒಟ್ಟು ಏಳು ದಿನಗಳಲ್ಲಿ ಸುಮಾರು 300 ಕಿ.ಮೀ. ದೂರ ಕ್ರಮಿಸುವ ಮೂಲಕ ಸ್ವಚ್ಛತೆಯ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ.

ನಾಗರಾಜ್ ಬಜಾಲ್ ಅವರ ಈ ಪಾದಯಾತ್ರೆಯು ಕೇವಲ ಕಾಲ್ನಡಿಗೆಯಾಗಿರಲಿಲ್ಲ, ಬದಲಿಗೆ ನಿರಂತರ ಜಾಗೃತಿ ಅಭಿಯಾನವಾಗಿತ್ತು. ಪ್ರತಿದಿನವೂ ಬೆಳಿಗ್ಗೆ 4ರಿಂದ 11ರವರೆಗೆ 'ಕಸ ಎಸೆಯದಿರಿ' ಎಂಬ ಪ್ಲೆಕ್ಸ್ ಕಾರ್ಡ್ ಹಿಡಿದು ಹೆದ್ದಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ಅವರು, 11ರಿಂದ ಸಂಜೆ 4ರವರೆಗೆ ತಮ್ಮ ಅಮೂಲ್ಯ ಸಮಯವನ್ನು ಶಾಲೆ, ಕಾಲೇಜು, ಪಂಚಾಯತ್ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಮೀಸಲಿಟ್ಟಿದ್ದರು. ಈ ಸ್ಥಳಗಳಲ್ಲಿ ಅವರು ಘನ ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ, ಮರುಬಳಕೆ, ಪ್ಲಾಸ್ಟಿಕ್ ನಿಷೇಧ ಮತ್ತು ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದ ಕುರಿತು ಸಭೆ ಮತ್ತು ಚರ್ಚೆಗಳನ್ನು ನಡೆಸಿದರು. ಸಂಜೆ 4ರಿಂದ ರಾತ್ರಿ 10ರವರೆಗೆ ಮತ್ತೆ ಪಾದಯಾತ್ರೆ ಮುಂದುವರೆಸುತ್ತಾ, ಬಸ್‌ಗಳು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಸಿದರು.

ಈ ಸುದೀರ್ಘ ನಡಿಗೆ ಸಂದರ್ಭದಲ್ಲಿ ನಾಗರಾಜ್ ಅವರು ಅಂಕೋಲ, ಕುಮಟ, ಇಡಗುಂಜಿ, ಭಟ್ಕಳ, ಕೋಟೇಶ್ವರ ಮತ್ತು ಪಡುಬಿದ್ರೆಗಳಲ್ಲಿ ರಾತ್ರಿ ವಾಸ್ತವ್ಯವಿದ್ದರು. ಇವರ ಈ ಪರಿಸರ ಕಾಳಜಿಗೆ ಕೆಲವೊಮ್ಮೆ ಸಂಘಸಂಸ್ಥೆಗಳು ವಾಸ್ತವ್ಯದ ವ್ಯವಸ್ಥೆ ಮಾಡಿದ್ದರೆ, ಉಳಿದಂತೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಪಾದಯಾತ್ರೆಯ ಅಂತ್ಯದಲ್ಲಿ ಮಂಗಳೂರಿಗೆ ತಲುಪಿದಾಗ ಅವರ ಪತ್ನಿ, ಮಕ್ಕಳು ಮತ್ತು ಸಹೋದ್ಯೋಗಿಗಳು ಅವರಿಗೆ ಜೊತೆಯಾಗಿ ಸ್ವಾಗತಿಸಿದರು. ಮಾನವನ ಪರಿಸರ ಪ್ರೀತಿಯ ಜೊತೆಗೆ, ಕುಮಟಾದಲ್ಲಿ ರಕ್ಷಣೆ ನೀಡಿದ ನಂತರ ಇಡಗುಂಜಿವರೆಗೆ ಇವರ ಜೊತೆ 45 ಕಿ.ಮೀ. ಹೆಜ್ಜೆ ಹಾಕಿದ 'ಚಾರ್ಲಿ' ಎಂಬ ಶ್ವಾನದ ಬಗ್ಗೆಯೂ ನಾಗರಾಜ್ ಅವರು ಭಾವುಕವಾಗಿ ನೆನಪಿಸಿಕೊಂಡರು. ಅವರ ಈ 'ಹಸಿರು ನಡಿಗೆ' ಘನತ್ಯಾಜ್ಯ ನಿರ್ವಹಣೆಯ ತುರ್ತು ಅಗತ್ಯದ ಬಗ್ಗೆ ಜನರಲ್ಲಿ ಆಶಾದಾಯಕ ಬದಲಾವಣೆಯನ್ನು ತರುವ ಪ್ರಯತ್ನವಾಗಿದೆ.



For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp


Post a Comment

0 Comments