ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ₹32 ಲಕ್ಷ ವಂಚನೆ: ದೂರು ದಾಖಲು

 

Ad
ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ, ಮಂಗಳೂರಿನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 32.06 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯು ಸೆಪ್ಟೆಂಬರ್ 9 ರಂದು ಆರಂಭವಾಗಿದ್ದು, ದೂರುದಾರರು ಫೇಸ್‌ಬುಕ್ ನೋಡುತ್ತಿದ್ದಾಗ 'ಕಾವ್ಯಾ ಶೆಟ್ಟಿ' ಎಂಬ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿ ಚಾಟ್ ಮಾಡಿದಾಗ, ಆಕೆ ತಾನು ಮುಂಬೈನಲ್ಲಿ ಟ್ರೇಡಿಂಗ್ ಕೆಲಸ ಮಾಡುವುದಾಗಿ ಮತ್ತು ಅದರಿಂದ ಭಾರಿ ಲಾಭ ಗಳಿಸಬಹುದು ಎಂದು ಆಮಿಷ ಒಡ್ಡಿದ್ದಳು.

ಆಕೆಯ ಮಾತಿನಿಂದ ಪ್ರಭಾವಿತರಾದ ದೂರುದಾರರು ಟ್ರೇಡಿಂಗ್ ಮಾಡಲು ಒಪ್ಪಿಕೊಂಡಾಗ, ಕಾವ್ಯಾ ಶೆಟ್ಟಿ ತನ್ನ ವಾಟ್ಸಾಪ್ ಸಂಖ್ಯೆಯಿಂದ ಲಿಂಕ್ ಒಂದನ್ನು ಕಳುಹಿಸಿದ್ದಾಳೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಒಂದು ಟ್ರೇಡಿಂಗ್ ಆ್ಯಪ್ ತೆರೆದುಕೊಂಡಿದೆ. ಅದರಲ್ಲಿ ದೂರುದಾರರು ತಮ್ಮ ಹೆಸರು, ಇಮೇಲ್ ಐಡಿ ಮತ್ತು ವೈಯಕ್ತಿಕ ವಿವರಗಳನ್ನು ನಮೂದಿಸಿದ್ದಾರೆ. ಆರಂಭದಲ್ಲಿ ಷೇರು ಖರೀದಿಸಲು 40,000 ರೂಪಾಯಿಗಳನ್ನು ಪಾವತಿಸುವಂತೆ ತಿಳಿಸಲಾಗಿದ್ದು, ಸೆಪ್ಟೆಂಬರ್ 13 ರಂದು ಆ ಹಣವನ್ನು ಪಾವತಿಸಿದಾಗ, ಲಾಭಾಂಶವಾಗಿ 9,504 ರೂಪಾಯಿಗಳು ಅವರ ಖಾತೆಗೆ ಜಮೆಯಾಗಿದೆ. ನಂತರ 2,00,000 ರೂಪಾಯಿಗಳನ್ನು ಹಾಕಿದಾಗ ಅದಕ್ಕೆ 23,760 ರೂಪಾಯಿಗಳು ಲಾಭಾಂಶ ಬಂದಿದ್ದು, ಇದು ದೂರುದಾರರಲ್ಲಿ ನಂಬಿಕೆ ಮೂಡಿಸಿದೆ.
ಈ ರೀತಿ ಪ್ರಾಥಮಿಕವಾಗಿ ಲಾಭ ತೋರಿಸುವ ಮೂಲಕ ನಂಬಿಕೆ ಗಳಿಸಿದ ನಂತರ, ವಂಚಕರು ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 24 ರ ನಡುವೆ, ದೂರುದಾರರು ಒಟ್ಟು 32,06,880 ರೂಪಾಯಿಗಳನ್ನು ಕಾವ್ಯಾ ಶೆಟ್ಟಿ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ, ನಂತರದಲ್ಲಿ ಯಾವುದೇ ಲಾಭಾಂಶ ದೊರೆಯದೆ, ಹೂಡಿಕೆ ಮಾಡಿದ ಮೂಲ ಹಣವೂ ವಾಪಸ್ ಬಾರದಿರುವಾಗ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಸಂಬಂಧ ದೂರುದಾರರು ಪೊಲೀಸರಿಗೆ ದೂರು ನೀಡಿದ್ದು, ಸೆನ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



Post a Comment

0 Comments