ಮೈಸೂರು ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಭರತ್ ಭಾರ್ಗವ ಎಂಬ ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮತ್ತಷ್ಟು ಮಾರ್ಕ್ಸ್ ಕೊಡುತ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ವಿದ್ಯಾರ್ಥಿನಿಯನ್ನು ಹೊರಗೆ ಪಬ್‌ಗೆ ಹೋಗಿ ಮೋಜು ಮಾಡೋಣ ಎಂದು ಕರೆದಿದ್ದಾನೆ ಎನ್ನಲಾಗಿದೆ. ಆತನ ಉಪಟಳ ಮತ್ತು ಅಸಭ್ಯ ವರ್ತನೆ ಸಹಿಸಲಾಗದೆ ವಿದ್ಯಾರ್ಥಿನಿ ಮಹಿಳಾ ಉಪನ್ಯಾಸಕರಿಗೆ ವಿಷಯ ತಿಳಿಸಿದ್ದಾಳೆ.
ಈ ಕುರಿತು ದೂರು ನೀಡಿದ್ದಕ್ಕೆ ವಿದ್ಯಾರ್ಥಿನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಖಾಸಗಿ ಅಂಗಗಳ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ತಾನು ಹೇಳಿದಂತೆ ನಡೆದುಕೊಂಡಿಲ್ಲ ಎಂದರೆ ಪರೀಕ್ಷೆಯಲ್ಲಿ ಫೇಲ್ ಮಾಡಿಸುತೇನೆ ಎಂದು ಕೂಡ ಬೆದರಿಕೆ ಹಾಕಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ವಿದ್ಯಾರ್ಥಿನಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತ ದೂರು ಸಲ್ಲಿಸಿರುವುದರಿಂದ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

0 Comments