ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (KMF)ದ ಜನಪ್ರಿಯ ಬ್ರಾಂಡ್ ಆದ 'ನಂದಿನಿ' ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ (CCB) ಮತ್ತು ಕೆಎಂಎಫ್‌ನ ಜಾಗೃತ ದಳವು ಜಂಟಿ ಕಾರ್ಯಾಚರಣೆಯ ಮೂಲಕ ಭೇದಿಸಿದೆ. ತಮಿಳುನಾಡಿನಲ್ಲಿ ಶುದ್ಧ ತುಪ್ಪಕ್ಕೆ ಕಲಬೆರಕೆ ಮಾಡಿ, ಅದನ್ನು ಮತ್ತೆ ಕರ್ನಾಟಕಕ್ಕೆ ತಂದು ಮೂಲ ಉತ್ಪನ್ನದಂತೆ ಮಾರಾಟ ಮಾಡುತ್ತಿದ್ದ ನಾಲ್ವರು ಮುಖ್ಯ ಆರೋಪಿಗಳಾದ ಮಹೇಂದ್ರ, ದೀಪಕ್, ಮುನಿರಾಜು ಮತ್ತು ಅಭಿ ಅರಸು ಅವರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು ₹1.26 ಕೋಟಿ ಮೌಲ್ಯದ ವಸ್ತುಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ. ಈ ಜಾಲದ ಕಾರ್ಯವೈಖರಿಯು ಆಘಾತಕಾರಿಯಾಗಿದ್ದು, ಕೆಎಂಎಫ್ ಡಿಸ್ಟ್ರಿಬ್ಯೂಟರ್ ಆಗಿದ್ದ ಮಹೇಂದ್ರ, ಬೆಂಗಳೂರಿನಿಂದ ಖರೀದಿಸಿದ ಶುದ್ಧ ನಂದಿನಿ ತುಪ್ಪವನ್ನು ತಮಿಳುನಾಡಿನ ತಿರುಪುರಿಗೆ ಕಳುಹಿಸುತ್ತಿದ್ದರು.
ತಿರುಪುರದಲ್ಲಿ, ಒಂದು ಲೀಟರ್ ಶುದ್ಧ ನಂದಿನಿ ತುಪ್ಪಕ್ಕೆ ನಾಲ್ಕು ಲೀಟರ್ ನಕಲಿ ತುಪ್ಪವನ್ನು ಕಲಬೆರಕೆ ಮಾಡಲಾಗುತ್ತಿತ್ತು. ಈ ನಕಲಿ ತುಪ್ಪವನ್ನು ತಯಾರಿಸಲು ಪಾಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಲಾ (ಡಾಲ್ಡಾ)ಗಳನ್ನು ಬಳಸಲಾಗುತ್ತಿತ್ತು. ಹೀಗೆ ತಯಾರಿಸಿದ ಮಿಶ್ರಿತ ತುಪ್ಪವನ್ನು ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನವೆಂದು ಬಿಂಬಿಸಿ ಮತ್ತೆ ಬೆಂಗಳೂರಿಗೆ ತಂದು ಮಾರಾಟ ಮಾಡಲಾಗುತ್ತಿತ್ತು. ಸಿಸಿಬಿ ಮತ್ತು ಕೆಎಂಎಫ್ ಜಂಟಿ ಕಾರ್ಯಾಚರಣೆಯು ಬೆಂಗಳೂರಿನ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್ ಗೋಡೌನ್ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿತು. ಈ ದಾಳಿಯ ಸಂದರ್ಭದಲ್ಲಿ ಬರೋಬ್ಬರಿ 8,136 ಲೀಟರ್ ನಕಲಿ ತುಪ್ಪ, ನಾಲ್ಕು ವಾಹನಗಳು, ಮಿಶ್ರಣ ಯಂತ್ರಗಳು, ಮತ್ತು ಕಲಬೆರಕೆಗಾಗಿ ಬಳಸಲಾಗುತ್ತಿದ್ದ ತೆಂಗಿನೆಣ್ಣೆ ಹಾಗೂ ಫಾಮ್ ಆಯಿಲ್ ಸೇರಿ ₹1 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಜಾಲದ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, "ಕೆಎಂಎಫ್ ಜಾಗೃತ ದಳವು ನೀಡಿದ ನಿಖರ ಮಾಹಿತಿ ಆಧಾರದಲ್ಲಿ ಜಂಟಿ ಪರಿಶೀಲನೆ ನಡೆಸಿ, ಈ ಬೃಹತ್ ಜಾಲವನ್ನು ಪತ್ತೆ ಮಾಡಲಾಗಿದೆ" ಎಂದು ತಿಳಿಸಿದರು. ಅಲ್ಲದೆ, ತಿರುಪುರೂರಿನಲ್ಲಿ ನಕಲಿ ತುಪ್ಪ ಮಿಶ್ರಣ ಮಾಡುತ್ತಿದ್ದ ಯೂನಿಟ್ ಮೇಲೂ ದಾಳಿ ನಡೆಸಲಾಗಿದೆ. ಪೊಲೀಸರ ತನಿಖೆಯು 2018ರಲ್ಲಿಯೇ ಇದೇ ರೀತಿಯ ಕೃತ್ಯ ನಡೆದಿರುವ ಸುಳಿವು ಸಿಕ್ಕಿರುವುದನ್ನು ದೃಢಪಡಿಸಿದ್ದು, ಕಳೆದ ಎರಡು ವರ್ಷಗಳಿಂದ ಈ ನಕಲಿ ಉತ್ಪನ್ನ ತಯಾರಿಕೆಯು ನಿರಂತರವಾಗಿ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಆಹಾರ ಸುರಕ್ಷತೆಯ ವಿಚಾರದಲ್ಲಿ ಗ್ರಾಹಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಈ ಕೃತ್ಯದ ಕುರಿತು ತೀವ್ರ ತನಿಖೆ ಮುಂದುವರಿದಿದೆ.

0 Comments