ಬೆಂಗಳೂರು: ವಾಹನ ಚಾಲನಾ ಕಲಿಕಾ ಪರವಾನಗಿ (ಎಲ್‌ಎಲ್‌ಆರ್) ಪಡೆಯಲು ಅರ್ಜಿ ಸಲ್ಲಿಸುವವರಿಗೆ ಜನವರಿ 1, 2026 ರಿಂದ ಹೊಸ ಮತ್ತು ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಲಿದೆ. ಅರ್ಜಿದಾರರು, ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಅವರು ತಿಳಿಸಿದ್ದಾರೆ. ಚಾಲನೆ ಕಲಿಯಲು ಅರ್ಜಿ ಹಾಕಿದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂಬುದನ್ನು ಈ ಪರೀಕ್ಷೆಯ ಮೂಲಕ ಪತ್ತೆಹಚ್ಚಲಾಗುವುದು. ಯಾವುದೇ ಸಮಸ್ಯೆ ಇಲ್ಲದವರಿಗೆ ಮಾತ್ರ ಪರವಾನಗಿ ಸಿಗಲಿದೆ.
ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಎನ್‌ಐಸಿ ಅಭಿವೃದ್ಧಿಪಡಿಸಿರುವ ಕೇಂದ್ರೀಕೃತ ವೆಬ್ ಆಧಾರಿತ ಸಾರಥಿ ತಂತ್ರಾಂಶವನ್ನು ಬಳಸಬೇಕು. ಇಲ್ಲಿ ಆಧಾರ್ ಮತ್ತು ಮೊಬೈಲ್ ಒಟಿಪಿ ಬಳಸಿ ಅರ್ಜಿ ಸಲ್ಲಿಸಬೇಕು. ನಂತರ ನಿಗದಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕವನ್ನು ಪಾವತಿಸಬೇಕು. ಪರವಾನಗಿ ಪ್ರಾಧಿಕಾರಿಗಳು ಅರ್ಜಿಯನ್ನು ಪರಿಶೀಲನೆ ನಡೆಸಿದ ಬಳಿಕ, ಅರ್ಜಿದಾರರಿಗೆ ಆನ್‌ಲೈನ್ ಮೂಲಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗುತ್ತದೆ.
ಹೊಸ ನಿಯಮದ ಪ್ರಕಾರ, ಅರ್ಜಿ ಸಲ್ಲಿಸಿದ ದಿನಾಂಕದಿಂದ ಏಳು ದಿನಗಳ ಒಳಗೆ ಅರ್ಜಿದಾರರು ಕಲಿಕಾ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಗದಿತ ಏಳು ದಿನಗಳ ಒಳಗೆ ಪರೀಕ್ಷೆ ತೆಗೆದುಕೊಳ್ಳದೇ ಇದ್ದರೆ, ಸಾರಥಿ ತಂತ್ರಾಂಶದಲ್ಲಿ ಅರ್ಜಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ನಿಯಮ ಜನವರಿ 1 ರಿಂದ ಜಾರಿಗೆ ಬರಲಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಡಿ.31ರ ಒಳಗೆ ಪರೀಕ್ಷೆ ತೆಗೆದುಕೊಳ್ಳಲು ಕೊನೆಯ ಅವಕಾಶ ನೀಡಲಾಗಿದೆ ಎಂದು ಯೋಗೀಶ್ ಅವರು ಮಾಹಿತಿ ನೀಡಿದ್ದಾರೆ.

0 Comments