ಇಂಟರ್ನೆಟ್ ಇಲ್ಲದ ಅಗ್ಗದ ಪ್ಲಾನ್‌ಗಳು ಕಡ್ಡಾಯ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ


 ನವದೆಹಲಿ, ಏಪ್ರಿಲ್ 9: Telecom Regulatory Authority of India (ಟ್ರಾಯ್) ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಕೇವಲ ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್ ಸೌಲಭ್ಯಗಳಿರುವ ಅಗ್ಗದ ಮೊಬೈಲ್ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ರೀಚಾರ್ಜ್ ಯೋಜನೆಗಳಲ್ಲಿ ಡೇಟಾ ಪ್ಯಾಕ್ ಕಡ್ಡಾಯವಾಗಿ ಸೇರಿರುವುದರಿಂದ, ಇಂಟರ್ನೆಟ್ ಬಳಸದೇ ಇರುವ ಗ್ರಾಹಕರಿಗೂ ಅನಗತ್ಯವಾಗಿ ಹೆಚ್ಚುವರಿ ವೆಚ್ಚವಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಟ್ರಾಯ್ ಈ ಕ್ರಮ ಕೈಗೊಂಡಿದೆ.

Ad


ದೇಶದಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರು ಇನ್ನೂ 2ಜಿ ಸೇವೆ ಬಳಸುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಗ್ರಾಹಕರಿಗೆ ಈ ಹೊಸ ಯೋಜನೆಗಳು ಆರ್ಥಿಕವಾಗಿ ಅನುಕೂಲಕರವಾಗಲಿವೆ. ಟ್ರಾಯ್ ನಡೆಸಿದ ಸಮೀಕ್ಷೆಯ ಪ್ರಕಾರ, ಕೇವಲ ಕರೆ ಮತ್ತು ಎಸ್‌ಎಂಎಸ್ ಸೇವೆ ಬೇಕಾದ ಬಳಕೆದಾರರು ಡೇಟಾ ಪ್ಯಾಕ್‌ಗಾಗಿ ಹೆಚ್ಚುವರಿ ಹಣ ಪಾವತಿಸುತ್ತಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ, 2012ರ ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಮಗಳಿಗೆ ತಿದ್ದುಪಡಿ ತಂದು, ಕೇವಲ ವಾಯ್ಸ್ ಮತ್ತು ಎಸ್‌ಎಂಎಸ್ ಸೌಲಭ್ಯಗಳಿರುವ ಕಡಿಮೆ ದರದ ಯೋಜನೆಗಳನ್ನು ಕಡ್ಡಾಯಗೊಳಿಸಲಾಗಿದೆ. 2024ರಲ್ಲಿ ನೀಡಿದ್ದ ಸೂಚನೆಯನ್ನು ಈಗ ಕಟ್ಟುನಿಟ್ಟಾಗಿ ಜಾರಿಗೆ ತರಲು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಬಳಕೆದಾರರು, ಹಿರಿಯ ನಾಗರಿಕರು ಮತ್ತು ಇಂಟರ್ನೆಟ್ ಬಳಸದ ಗ್ರಾಹಕರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ.

Post a Comment

0 Comments