ಪ್ರಶಾಂತ ವಾತಾವರಣದಲ್ಲಿ ಹಚ್ಚ ಹಸುರಿನ ಆಹ್ಲಾದತೆಯಿಂದ ಕಂಗೊಳಿಸುವ ಮಂಗಳೂರಿನ ಹೊರವಲಯದಲ್ಲಿದ್ದರೂ ಸಹ ತನ್ನದೇ ಆದ ಛಾಪನ್ನು ಹೊಂದಿರುವ ಕಾವೂರಿನಲ್ಲಿ, 2002ನೇ ಸಾಲಿನಲ್ಲಿ ಸ್ಥಾಪಿಸಲ್ಪಟ್ಟ ಸರಕಾರಿ ಪ್ರಥಮ ದರ್ಜೆ ಕಾಲೇಜು 23 ಶೈಕ್ಷಣಿಕ ವರ್ಷಗಳನ್ನು ಪೂರೈಸಿದೆ. "ಜ್ಞಾನವೇ ಶಕ್ತಿ" ఎంబ ಧೈಯದೊಂದಿಗೆ ವಿದ್ಯಾದಾನಗೈಯುತ್ತಿರುವ ಈ ವಿದ್ಯಾಸಂಸ್ಥೆ ಪ್ರಾರಂಭವಾದಂದಿನಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದಿ ಇಂದು ತನ್ನದೇ ಆದ ಸುಂದರ ಕಟ್ಟಡ, ಮೂಲಭೂತ ಸೌಲಭ್ಯಗಳು ಮತ್ತು ತಂತ್ರಜ್ಞಾನ ಆಧಾರಿತ ಸೌಕರ್ಯಗಳನ್ನು ಹೊಂದಿದ್ದು, ವಿದ್ಯಾಕಾಂಕ್ಷಿಗಳನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ನ್ಯಾಕ್ ಮೌಲ್ಯ ಮಾಪನದ ಪ್ರಥಮ ಸುತ್ತಿನಲ್ಲಿಯೇ B++ ಶ್ರೇಣಿಯನ್ನು ಪಡೆದಿರುವುದು ಈ ಸಂಸ್ಥೆಯ ವಿಶೇಷತೆ.
ಪ್ರಸ್ತುತ 175 ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದು, ಒಟ್ಟು 8 ಖಾಯಂ ಉಪನ್ಯಾಸಕರು ಹಾಗೂ 13 ಮಂದಿ ಅತಿಥಿ ಉಪನ್ಯಾಸಕರು ಹಾಗೂ 13 ಮಂದಿ ಅತಿಥಿ ಉಪನ್ಯಾಸಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾಲೇಜು 4 ಎಕರೆ ಸರಕಾರಿ ಸ್ವಾಮ್ಯದ ವಿಶಾಲ ಜಾಗವನ್ನು ಹೊಂದಿದ್ದು ಸ್ವಂತ ಕಟ್ಟಡವನ್ನು ಹೊಂದಿದೆ. ಸುಸಜ್ಜಿತ ತರಗತಿ ಕೊಠಡಿ, ಸ್ಮಾರ್ಟ್ ಕ್ಲಾಸ್‌ಗಳನ್ನು ಹೊಂದಿದ್ದು, ಆಧುನಿಕ ತಂತ್ರಜ್ಞಾನ ಆಧಾರಿತ ಪಾಠ ಪ್ರವಚನಗಳನ್ನು ನೀಡುತ್ತಿದೆ. ಕಾಲೇಜು ವಿಶಾಲ ಆಟದ ಮೈದಾನವನ್ನು ಹೊಂದಿದ್ದು ಸುತ್ತಲೂ ವಿದ್ಯಾರ್ಥಿಗಳೇ ನಿರ್ಮಿಸಿದ ಕೈತೋಟ, ಬಾಳೆಗಿಡ, ತೆಂಗು ಹಾಗೂ ಹಣ್ಣಿನ ಗಿಡಗಳು ಕಾಲೇಜಿಗೆ ವಿಶೇಷ ಮೆರುಗನ್ನು ನೀಡುತ್ತಿವೆ.
ಕಾಲೇಜಿನ ಗ್ರಂಥಾಲಯವು ಹತ್ತು ಸಾವಿರಕ್ಕೂ ಮೇಲ್ಪಟ್ಟು ಪುಸ್ತಕಗಳನ್ನು ಹೊಂದಿದ್ದು ಅವುಗಳಲ್ಲಿ ಆಕರ ಗ್ರಂತಗಳು, ಪಠ್ಯ ಪುಸ್ತಕಗಳು, ವಿವಿಧ ವಿಷಯಗಳಿಗೆ ಸಂಬಂಧಿಸಿದ ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು, ದಿನಪತ್ರಿಕೆಗಳನ್ನು, ಸಾಪ್ತಾಹಿಕ ಸಂಪದಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳ ಜ್ಞಾನವರ್ಧನೆಗೆ ಪೂರಕವಾಗಿದೆ. ಅಲ್ಲದೇ ಗ್ರಂಥಾಲಯದ ಪುಸ್ತಕಗಳ ಕಂಪ್ಯೂಟರೀಕರಣದ ಕಾರ್ಯ ಭರದಿಂದ ಸಾಗಿದೆ.
ಕಾಲೇಜಿನಲ್ಲಿ ಬಿ.ಎ, ಬಿ.ಕಾಂ,ಬಿ.ಬಿ.ಎ ವಿಭಾಗ, ಬಿ.ಸಿ.ಎ ವಿಭಾಗವನ್ನು 2023-24ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗಿದೆ. ಈ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಫಲಿತಾಂಶ ಬರುತ್ತಿದ್ದು, ಬಿ.ಎ. ಅಂತಿಮ ಪದವಿನಿಂದಲೂ ಸತತ ಮೂರು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ಬಂದಿರುತ್ತದೆ. 2024-25ನೇ ಸಾಲಿನಲ್ಲಿ ಅಂತಿಮ ಪದವಿಯಲ್ಲಿ ಬಿಎ 100%, ಬಿಬಿಎ 83.33% ಹಾಗೂ ಬಿಕಾಂ 77% ಫಲಿತಾಂಶ ಬಂದಿರುತ್ತದೆ.
ವಿದ್ಯಾರ್ಥಿಗಳು ಸ್ವಯಂ ಶಿಸ್ತನ್ನು ರೂಢಿಸಿಕೊಂಡಿದ್ದು, ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಹಾಗೂ ಸಮುದಾಯದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಸಿಕೊಂಡಿದ್ದಾರೆ.
ಕಾಲೇಜು ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದ್ದು, ವಿದ್ಯಾರ್ಜನೆಗೆ ಸಹಕಾರಿಯಾಗುವಂತೆ ವೈ ಫೈ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಕಾಲೇಜಿನಲ್ಲಿ ಎನ್‌ಎಸ್‌ಎಸ್, ರೇಂಜರ್ಸ್, ಯುವರೆಡ್ ಕ್ರಾಸ್, ಗ್ರಾಹಕ ಕ್ಲಬ್ ಸಕ್ರಿಯವಾಗಿ ಕಾರನಿರ್ವಹಿಸುತ್ತಿದ್ದು, ಸಮುದಾಯದತ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಅಲ್ಲದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಲೇಜಿನಲ್ಲಿ ವಿವಿಧ ಸಮಿತಿಗಳು ಕಾರ್ಯೋನ್ಮುಖವಾಗಿವೆ.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರಕಾರದಿಂದ ಹಾಗೂ ಸರಕಾರೇತರ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ರೂಪದಲ್ಲಿ ಆರ್ಥಿಕ ನೆರವು ದೊರಕುತ್ತಿದೆ. ದೂರದ ಊರಿನಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಸೌಲಭ್ಯ ದೊರೆಯುತ್ತಿದೆ.
ಅದೇ ರೀತಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಸಾಧನೆಯನ್ನು ಮಾಡಿರುತ್ತಾರೆ. ರಾಷ್ಟ್ರಮಟ್ಟದ ಬಹುಮಾನ: ತೃತೀಯ ಬಿಕಾಂನ ಅಂಜಲಿ ಕೆ. ಜೋಗಿ ಇವರು ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಮಹಿಳಾ ವುಶು 56 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ. ತೃತೀಯ ಬಿಬಿಎ ವಿದ್ಯಾರ್ಥಿ ಶಾಹಿಲ್ ಇವರು 2024ರ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.
ಉದ್ಯೋಗ ತರಬೇತಿ: ವಿದ್ಯಾರ್ಥಿಗಳಿಗೆ ಗ್ರಾಹಕ ಶಿಕ್ಷಣ, ಹೊಲಿಗೆ ತರಬೇತಿ ಮತ್ತುಕಂಪ್ಯೂಟರ್ ತರಭೇತಿಗಳಲ್ಲಿ ಸರ್ಟಿಫಿಕೇಟ್ ಕೋರ್ಸುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ ಹಿಂದುಳಿದ ಮತ್ತು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕೆಜಿಟಿಟಿಐ ಮೂಲಕ ಉಚಿತ ತಾಂತ್ರಿಕ ತರಭೇತಿಯನ್ನು ನೀಡಲಾಗುತ್ತಿದೆ.
ದೈನಂದಿನ ತರಗತಿಯ ಜೊತೆಗೆ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಎಲ್‌ಎಂಎಸ್) ಮೂಲಕ ಆನ್‌ಲೈನ್ ಕಲಿಕಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಕಾಲೇಜಿನಲ್ಲಿ ಪ್ರವೇಶಾತಿ ಶುಲ್ಕ ಅತೀ ಕಡಿಮೆಯಾಗಿದ್ದು, ಬಡವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕವನ್ನು ಕೆಲವು ದಾನಿಗಳು ವಹಿಸಿಕೊಂಡು ಬಂದಿರುತ್ತಾರೆ. 2025-26ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಯು ಆಗಸ್ಟ್ 30ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಹೊಂದುವಂತೆ ಪ್ರಾಂಶುಪಾಲರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



0 Comments