ಮಂಗಳೂರು: ಜ್ಯುವೆಲ್ಲರಿ ಸಿಬ್ಬಂದಿ ಕಿಡ್ನಾಪ್ – 1.5 ಕೋಟಿ ರೂ. ಚಿನ್ನದ ಗಟ್ಟಿ ದರೋಡೆ - ನಾಲ್ವರು ಆರೋಪಿಗಳ ಬಂಧನ

Theft

 ಮಂಗಳೂರು: ನಗರದಲ್ಲಿ ನಡೆದಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿದರೋಡೆ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಉಳ್ಳಾಲ ತಾಲೂಕಿನವರಾಗಿದ್ದು, ಫಾರಿಶ್ (18), ಸಫ್ಘಾನ್ (23), ಅರಾಫತ್ ಆಲಿ (18) ಮತ್ತು ಫರಾಝ್ (19) ಎಂದು ಗುರುತಿಸಲಾಗಿದೆ.



ಸೆಪ್ಟೆಂಬರ್ 26 ರಂದು ರಾತ್ರಿ 8.45ರ ಸುಮಾರಿಗೆ ಚಾಯ್ಸ್ ಗೋಲ್ಡ್ ಅಂಗಡಿಯ ಕೆಲಸಗಾರ ಮುಸ್ತಾಫ ಅವರು ಸ್ಕೂಟರ್ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟು ಸಾಗಿಸುತ್ತಿದ್ದ ವೇಳೆ ಆರೋಪಿಗಳು ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಬಳಿ ತಡೆದು ನಿಲ್ಲಿಸಿದರು. ಇದೇ ವೇಳೆಗೆ ಮತ್ತಿಬ್ಬರು ಬಿಳಿ ಬಣ್ಣದ ಕಾರಿನಲ್ಲಿ ಬಂದು ಮುಸ್ತಾಫರನ್ನು ಬಲವಂತವಾಗಿ ಕಾರಿಗೆ ಕೂರಿಸಿ ಅಪಹರಿಸಿದರು.


ಅಪಹರಣದ ಬಳಿಕ ಎಕ್ಕೂರು ಪ್ರದೇಶದಲ್ಲಿ ಮುಸ್ತಾಫರಿಗೆ ಹಲ್ಲೆ ನಡೆಸಿ, ಅವರ ಬಳಿ ಇದ್ದ 1.5 ಕೋಟಿ ಮೌಲ್ಯದ ಚಿನ್ನದ ಗಟ್ಟಿಯನ್ನು ಕದ್ದೊಯ್ದರು. ಈ ಪ್ರಕರಣದಲ್ಲಿ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಹಿಂದೆ ಕೆಲಸ ಮಾಡಿದ್ದ ಫಾರಿಶ್ ಎಂಬಾತ ಮುಖ್ಯ ಸಂಚುಕೋರನೆಂದು ಪತ್ತೆಯಾಗಿದೆ. ಆತ ಮುಸ್ತಾಫರ ಚಲನವಲನದ ಮಾಹಿತಿಯನ್ನು ಇತರೆ ಆರೋಪಿಗಳಿಗೆ ಹಂಚಿಕೊಂಡಿದ್ದನು.


ಪೊಲೀಸರು ದರೋಡೆಗೆ ಬಳಸಿದ KA-19HT-8545 ನಂಬರಿನ ಸುಜುಕಿ ಆಕ್ಸೆಸ್ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ದರೋಡೆಗೆ ಬಳಸಿದ ಕಾರು ಮತ್ತು ಕಳುವಾದ ಚಿನ್ನವನ್ನು ಪತ್ತೆಹಚ್ಚುವ ಕಾರ್ಯ ಇನ್ನೂ ಮುಂದುವರಿದಿದೆ.


ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ)ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕ ಹಾಗೂ ಮಂಗಳೂರು ಉತ್ತರ ಠಾಣೆಯ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:


ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?


 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp



Post a Comment

0 Comments