ಬೆಂಗಳೂರು: ಸಿನಿಮಾ ನೋಡಿ ದೈವಾರಾಧನೆಯನ್ನು ಅನುಕರಿಸಿ ಅನಗತ್ಯ ವರ್ತನೆ ತೋರುತ್ತಿರುವವರ ವಿರುದ್ಧ 'ಕಾಂತಾರ ಚಾಪ್ಟರ್-1' ಚಿತ್ರತಂಡವು ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಬೆಂಗಳೂರು ತುಳುಕೂಟ ಸೇರಿದಂತೆ ವಿವಿಧ ಸಂಘಟನೆಗಳ ನಿರಂತರ ಒತ್ತಾಯದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಅವರು ಜಂಟಿಯಾಗಿ ಈ ಮಹತ್ವದ ಮನವಿ ಮಾಡಿದ್ದಾರೆ.
'ಕಾಂತಾರ ಚಾಪ್ಟರ್-1' ಸಿನಿಮಾ ಪ್ರದರ್ಶನದ ವೇಳೆ ಕೆಲವರು ದೈವದ ವೇಷ ಹಾಕಿ ಚಿತ್ರಮಂದಿರದಲ್ಲಿ ಓಡಾಡುವುದು, ಇನ್ನು ಕೆಲವರು ಸಿನಿಮಾ ನೋಡುವಾಗ ದೈವ ಮೈಮೇಲೆ ಬಂದಂತೆ ವರ್ತಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ತುಳುನಾಡಿನ ನಂಬಿಕೆ ಹಾಗೂ ಅಸ್ಮಿತೆಗೆ ಮಾಡುವ ಅಪಮಾನ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಬೆಂಗಳೂರು ತುಳುಕೂಟವು ಈ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪತ್ರ ಬರೆದಿತ್ತು. ದೈವದ ಅನುಕರಣೆಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ರೋಸಿಹೋಗಿರುವುದಾಗಿ ತಿಳಿಸಿರುವ ಕೂಟ, ದೈವದ ಬಗ್ಗೆ ಜಾಗೃತಿ ಮೂಡಿಸಲು ಪತ್ರಿಕಾಗೋಷ್ಠಿ ನಡೆಸಿ, ಚಿತ್ರ ಪ್ರದರ್ಶನಕ್ಕೂ ಮುನ್ನ 'ಡಿಸ್ಕ್ಲೇಮರ್' ಹಾಕುವಂತೆ ಮನವಿ ಮಾಡಿತ್ತು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಮನವಿ ಮಾಡಿಕೊಂಡಿದೆ. "ದೈವಾರಾಧನೆಯು ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ತೋರಿಸಿದ್ದೇವೆ. ಆದರೆ ಕೆಲವರು ಸಿನೆಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ರೀತಿಯ ವರ್ತನೆಗಳನ್ನು ಮಾಡುವುದು ನಮ್ಮ ಗಮನಕ್ಕೆ ಬಂದಿದೆ. ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರ ಹಾಗೂ ಅಕ್ಷಮ್ಯ ಅಪರಾಧ," ಎಂದು ತಂಡ ಹೇಳಿದೆ.
"ಇಂತಹ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ. ಚಿತ್ರಮಂದಿರ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನು ಅನುಕರಣೆ ಮಾಡಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಚಿತ್ರತಂಡ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ.
'ಕಾಂತಾರ ಚಾಪ್ಟರ್-1' ಸಿನಿಮಾ ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈ ಮಧ್ಯೆ ದೈವದ ಆಚರಣೆಗೆ ಅಪಚಾರ ಎಸಗುವವರ ವಿರುದ್ಧ ಚಿತ್ರತಂಡ ಗಂಭೀರ ಕ್ರಮಕ್ಕೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಜಾಹೀರಾತಿಗಾಗಿ ಸಂಪರ್ಕಿಸಿ:
ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?
ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


0 Comments