ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ನೂರಾರು ಯುವಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದ ದಂಪತಿಯನ್ನು ಕಾವೂರು ಪೊಲೀಸರು ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ವೀವರ್ಸ್ ಕಾಲೊನಿ ನಿವಾಸಿ ಪ್ರಕೃತಿ ಯು. (34) ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ ಚರ್ಚ್ ರೋಡ್ ಮೂಲದ ಆಲ್ಬನ್ ರೆಬೇರೊ (42) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಪ್ರೀತಿಸಿ ಮದುವೆಯಾದ ಬಳಿಕ ಆನೇಕಲ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿಗಳು ಆನ್‌ಲೈನ್ ಮೂಲಕ ಮತ್ತು ಪರಿಚಿತರ ನೆರವಿನಿಂದಲೇ ತಮ್ಮ ಜಾಲವನ್ನು ವಿಸ್ತರಿಸಿದ್ದರು. ಮುಖ್ಯವಾಗಿ ಕ್ರೈಸ್ತ ಸಮುದಾಯದ ಯುವಕರನ್ನು ಗುರಿಯಾಗಿಸಿಕೊಂಡು, "ಇಂಗ್ಲೆಂಡ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಉತ್ತಮ ಸಂಬಳದ ಕೆಲಸ ಸಿಗುತ್ತದೆ" ಎಂಬ ಸುಳ್ಳು ಆಮಿಷ ಒಡ್ಡುತ್ತಿದ್ದರು.
ವಿದೇಶಿ ಉದ್ಯೋಗದ ಕನಸು ಕಂಡಿದ್ದ ಪ್ರತಿ ಯುವಕರಿಂದಲೂ ₹3 ಲಕ್ಷದಿಂದ ₹4 ಲಕ್ಷದವರೆಗೆ ಹಣವನ್ನು ವಸೂಲಿ ಮಾಡಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಈ ದಂಪತಿಗಳು ನೂರಾರು ಮಂದಿಯಿಂದ ಈ ರೀತಿಯಾಗಿ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಹಣ ಪಾವತಿಸಿದ ಬಳಿಕ ಸಂತ್ರಸ್ತರು ದಂಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ.
ವಂಚನೆಗೆ ಒಳಗಾದ 30ಕ್ಕೂ ಹೆಚ್ಚು ಮಂದಿ ಈಗಾಗಲೇ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದು, ಹೆಚ್ಚಿನವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡು ಬೆಂಗಳೂರಿನ ಆನೇಕಲ್‌ನಲ್ಲಿ ನೆಲೆಸಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ದಂಪತಿಗಳು ಆನೇಕಲ್‌ನಲ್ಲಿ "ಪಬ್ಲಿಕ್ ಸ್ಕೂಲ್" ಎಂಬ ಹೆಸರಿನಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು. ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದಾಗ, 24 ಪಾಸ್‌ಪೋರ್ಟ್‌ಗಳು ಹಾಗೂ ಸುಮಾರು ₹4.30 ಲಕ್ಷ ಮೌಲ್ಯದ 43 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಂಗಳೂರಿನಿಂದ ಮಂಗಳೂರಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments