ವೈದ್ಯ ಪತ್ನಿಯ ಕೊಲೆ: ಪತಿ, ಸರ್ಜನ್ ಡಾ. ಮಹೇಂದ್ರ ರೆಡ್ಡಿ ಬಂಧನ; 'ಪ್ರೊಪೋಫೊಲ್' ಅರಿವಳಿಕೆ ಔಷಧ ಬಳಸಿ ಕೃತ್ಯ

 

Ad
ಬೆಂಗಳೂರು: ಚರ್ಮರೋಗ ತಜ್ಞೆ ಡಾ. ಕೃತಿಕಾ ಅವರ ಸಂಶಯಾಸ್ಪದ ಸಾವಿನ ಆರು ತಿಂಗಳ ನಂತರ, ಅವರ ಪತಿ, ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿ ಅವರನ್ನು ಮಲ್ಲತಹಳ್ಳಿ ಪೊಲೀಸರು ಬಂಧಿಸಿದ್ದಾರೆ. 'ಪ್ರೊಪೋಫೊಲ್' ಎಂಬ ಮಾರಕ ಅರಿವಳಿಕೆ ಔಷಧ ನೀಡಿ ಪತ್ನಿಯನ್ನು ಕೊಲೆ ಮಾಡಿದ ಆರೋಪ ಅವರ ಮೇಲಿದೆ. ಆರಂಭದಲ್ಲಿ ಸಹಜ ಸಾವು ಎಂದು ದಾಖಲಾಗಿದ್ದ ಈ ಪ್ರಕರಣಕ್ಕೆ, ವಿಧಿವಿಜ್ಞಾನ ವರದಿ ಮತ್ತು ಕೃತಿಕಾ ಅವರ ಕುಟುಂಬದವರ ಒತ್ತಾಯದ ನಂತರ ಮಹತ್ವದ ತಿರುವು ಸಿಕ್ಕಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಕೃತಿಕಾ (28) ಮತ್ತು ಡಾ. ಮಹೇಂದ್ರ ರೆಡ್ಡಿ ಅವರು 2024ರ ಮೇ 26ರಂದು ವಿವಾಹವಾಗಿದ್ದರು. ಚರ್ಮರೋಗ ತಜ್ಞೆಯಾಗಿದ್ದ ಕೃತಿಕಾ ಅವರು ಮೇ 4, 2025ರಂದು ತಮ್ಮ ಕನಸಿನ ಕ್ಲಿನಿಕ್ 'ಸ್ಕಿನ್ & ಸ್ಕಾಲ್ಪೆಲ್' ಅನ್ನು ಆರಂಭಿಸುವ ಸಿದ್ಧತೆಯಲ್ಲಿದ್ದರು.

ಆದರೆ, ಮದುವೆಯಾದ ಕೇವಲ 11 ತಿಂಗಳ ನಂತರ, 2025ರ ಏಪ್ರಿಲ್ 23ರಂದು ಕೃತಿಕಾ ಅವರು ತಮ್ಮ ತಂದೆಯ ಮನೆಯಲ್ಲಿ ಅಕಸ್ಮಾತ್ ಕುಸಿದು ಬಿದ್ದರು. ಮಹೇಂದ್ರ ಅವರು ಚಿಕಿತ್ಸೆಯ ನೆಪದಲ್ಲಿ ಎರಡು ದಿನಗಳ ಕಾಲ ಇಂಟ್ರಾವೆನಸ್ ಇಂಜೆಕ್ಷನ್‌ಗಳನ್ನು ನೀಡಿದ್ದರು. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

Ad

ಸಹಜ ಸಾವು ಎಂದು ಆರಂಭದಲ್ಲಿ ಅಸ್ವಾಭಾವಿಕ ಮರಣ ವರದಿ (UDR) ಪ್ರಕರಣ ದಾಖಲಿಸಲಾಗಿತ್ತು. ಆದರೆ, ಕೃತಿಕಾ ಅವರ ಅಕ್ಕ, ರೇಡಿಯಾಲಜಿಸ್ಟ್ ಡಾ. ನಿಕಿತಾ ಎಂ. ರೆಡ್ಡಿ ಅವರು ಸಾವಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿ ಪುನ‌ರ್ ತನಿಖೆಗೆ ಒತ್ತಾಯಿಸಿದರು. ಕೃತಿಕಾ ಅವರಿಗೆ ಯಾವುದೇ ತೀವ್ರ ಆರೋಗ್ಯ ಸಮಸ್ಯೆ ಇರಲಿಲ್ಲ. ಈ ಅನುಮಾನದ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ (FSL) ವರದಿಗಾಗಿ ಕಾಯಲಾಯಿತು.

ಆರು ತಿಂಗಳ ಬಳಿಕ ಬಂದ FSL ವರದಿಯು ಬೆಚ್ಚಿಬೀಳಿಸುವ ಸತ್ಯವನ್ನು ಹೊರಹಾಕಿತು. ಕೃತಿಕಾ ಅವರ ದೇಹದ ಹಲವು ಅಂಗಾಂಗಗಳಲ್ಲಿ 'ಪ್ರೊಪೋಫೊಲ್' ಎಂಬ ಅರಿವಳಿಕೆ ಔಷಧದ ಅಂಶಗಳು ಪತ್ತೆಯಾಗಿದ್ದು, ಅದರಿಂದಲೇ ಸಾವು ಸಂಭವಿಸಿದೆ ಎಂದು ತಜ್ಞರು ದೃಢಪಡಿಸಿದರು. ಪ್ರೊಪೋಫೊಲ್ ಅನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿ (OT) ಮತ್ತು ಐಸಿಯುಗಳಲ್ಲಿ ಮಾತ್ರ ಬಳಸಲಾಗುತ್ತದೆ.

FSL ವರದಿಯ ಆಧಾರದ ಮೇಲೆ ಮಾರತಹಳ್ಳಿ ಪೊಲೀಸರು ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (ಭಾ.ನ.ಸಂ) 2023ರ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಮರು ತನಿಖೆ ಆರಂಭಿಸಿದರು. ಘಟನೆಯ ನಂತರ ಉಡುಪಿ ಜಿಲ್ಲೆಯ ಮಣಿಪಾಲಕ್ಕೆ ಸ್ಥಳಾಂತರಗೊಂಡಿದ್ದ ಪತಿ ಡಾ. ಮಹೇಂದ್ರ ರೆಡ್ಡಿ ಅವರನ್ನು ಅಕ್ಟೋಬ‌ರ್ 14ರಂದು ಲುಕ್‌ಔಟ್ ನೋಟಿಸ್‌ ಮೂಲಕ ಬಂಧಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶಸ್ತ್ರಚಿಕಿತ್ಸಕನಾಗಿದ್ದ ಮಹೇಂದ್ರ ಅವರು ತಮ್ಮ ವೃತ್ತಿಪರ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಆಸ್ಪತ್ರೆಯ ಓಟಿ ಮತ್ತು ಐಸಿಯುಗಳಲ್ಲಿ ಬಳಸುವ ಪ್ರೊಪೋಫೊಲ್ ಅನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ನಂತರ ಅದನ್ನು ತಮ್ಮ ಪತ್ನಿಗೆ ನೀಡಿ, ಇದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. ಕೊಲೆ ಯೋಜನೆ, ಸಾಕ್ಷ್ಯ ಮರೆಮಾಚಲು ಮತ್ತು ವೈದ್ಯಕೀಯ ದಾಖಲೆಗಳನ್ನು ತಿದ್ದಲು ಅವರು ತಮ್ಮ ವೈದ್ಯಕೀಯ ಜ್ಞಾನವನ್ನು ಬಳಸಿದ್ದಾರೆಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಂಧಿತ ಮಹೇಂದ್ರ ಅವರ ಕುಟುಂಬಕ್ಕೆ ಕ್ರಿಮಿನಲ್ ಹಿನ್ನಲೆಯೂ ಇದ್ದು, ಈ ಮಾಹಿತಿ ಮದುವೆಯ ವೇಳೆ ಮುಚ್ಚಿಡಲಾಗಿತ್ತು ಎಂದು ಕೃತಿಕಾ ಕುಟುಂಬ ಹೇಳಿದೆ. ಕೃತಿಕಾ ತಂದೆ ಮುನಿ ರೆಡ್ಡಿ ಅವರು ಭಾವುಕರಾಗಿ, "ಕೃತಿಕಾ ತನ್ನ ಗಂಡನನ್ನು ಸಂಪೂರ್ಣವಾಗಿ ನಂಬಿದ್ದಳು. ಜೀವ ಉಳಿಸಬೇಕಾದ ವೈದ್ಯಕೀಯ ಜ್ಞಾನವನ್ನೇ ಅವಳ ಕೊಲೆಗೆ ಬಳಸಲಾಗಿದೆ. ಕೃತಿಕಾಗೆ ನ್ಯಾಯ ದೊರೆತರೆ ಅದು ಪ್ರೀತಿ ಮತ್ತು ನಂಬಿಕೆಯಲ್ಲಿ ಬದುಕುವ ಪ್ರತಿಯೊಬ್ಬ ಮಹಿಳೆಗೆ ನ್ಯಾಯ ದೊರೆತಂತೆಯೇ," ಎಂದು ಹೇಳಿದರು.

ಪೊಲೀಸರು ಪ್ರೊಪೋಫೊಲ್ ಔಷಧದ ಮೂಲ ಮತ್ತು ಖರೀದಿ ದಾಖಲೆಗಳ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments