ಕುದ್ಮಾರು: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.23ರಂದು ಮಹಾ ಚಂಡಿಕಾ ಹೋಮ; ಮಾಣಿಲ ಶ್ರೀಗಳ ಉಪಸ್ಥಿತಿ

 

Ad
ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬರುವ ನವೆಂಬರ್ 23, 2025ರ ಆದಿತ್ಯವಾರದಂದು 'ಮಹಾ ಚಂಡಿಕಾ ಹೋಮ'ವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 7:30 ರಿಂದ ಆರಂಭವಾಗಲಿರುವ ಈ ಧಾರ್ಮಿಕ ಕಾರ್ಯಕ್ರಮವು ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ. ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಹೋಮದ ಪೂರ್ಣಾಹುತಿ ಮತ್ತು ಧಾರ್ಮಿಕ ವಿಧಿವಿಧಾನಗಳು ಜರಗಲಿವೆ.

ಸುಮಾರು 800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ವಿಜಯನಗರ ಅರಸರ ಕಾಲದ ಹಿನ್ನೆಲೆಯನ್ನು ಹೊಂದಿದೆ. ಪಾಂಡವರು ವನವಾಸದ ವೇಳೆ ಇಲ್ಲಿ ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿದ್ದರು ಹಾಗೂ ಭೀಮನು ನಿರ್ಮಿಸಿದ ಬಾವಿಯಲ್ಲಿ ಇಂದಿಗೂ ನೀರು ಬತ್ತದಿರುವುದು ಇಲ್ಲಿನ ಪವಾಡವಾಗಿದೆ. ಪಂಚಲಿಂಗೇಶ್ವರ ಹಾಗೂ ಬಂಧುಕೇಶ್ವರ ದೇವರು ಒಂದೇ ಅಂಗಣದಲ್ಲಿ ನೆಲೆಸಿರುವುದು ಮತ್ತು ಸೋಣ ತಿಂಗಳ ತೀರ್ಥಸ್ನಾನಕ್ಕೆ ಈ ಕ್ಷೇತ್ರವು ಹೆಸರುವಾಸಿಯಾಗಿದೆ.

ಪ್ರಸ್ತುತ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿದ್ದು, ಅಷ್ಟಮಂಗಲ ಪ್ರಶ್ನಾಚಿಂತನೆಯಂತೆ 2026ರಲ್ಲಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ. ಈ ಮಹತ್ಕಾರ್ಯದ ಯಶಸ್ಸಿಗಾಗಿ ಮತ್ತು ದೈವ ದೇವರ ಅನುಗ್ರಹಕ್ಕಾಗಿ ಈ ಮಹಾ ಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ತ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸುವಂತೆ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ದಾರ ಸಮಿತಿಯ ಪ್ರಕಟಣೆ ತಿಳಿಸಿದೆ.

Post a Comment

0 Comments