ಉಡುಪಿ, ನವೆಂಬರ್ 26:
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಗೆ ಭೇಟಿ ನೀಡಲಿದ್ದು, ಕೂಟದ ಕೃಷ್ಣ ಮಠದಲ್ಲಿ ಆಯೋಜಿಸಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಕಡ್ಡಾಯ ಸುರಕ್ಷತಾ ಕ್ರಮವಾಗಿ ಕೆಲವು ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.
ಜಿಲ್ಲಾಧಿಕಾರಿ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ಉಡುಪಿ ನಗರ ಠಾಣಾ ವ್ಯಾಪ್ತಿ, ಮಲ್ಪೆ ಠಾಣಾ ವ್ಯಾಪ್ತಿ ಮತ್ತು ಮಣಿಪಾಲ್ ಠಾಣಾ ವ್ಯಾಪ್ತಿಯಲ್ಲಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನವೆಂಬರ್ 28ರಂದು ರಜೆ ಅನ್ವಯವಾಗಲಿದೆ.
ಪ್ರಧಾನಿ ಭೇಟಿ ಸಂದರ್ಭ ಉಡುಪಿ ನಗರದಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿದ್ದು, ಸುಮಾರು 30,000ಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಅದೇ ವೇಳೆ, ಪ್ರಧಾನಿ ಮೋದಿಯವರ ಭೇಟಿಗೆ ಸಂಬಂಧಿಸಿ ಈಗಾಗಲೇ ನಗರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಂಚಾರ ನಿರ್ವಹಣೆಗೆ ವಿಶೇಷ ಪೊಲೀಸ್ ಸನ್ನದ್ಧತೆ ಕೈಗೊಳ್ಳಲಾಗಿದೆ.

0 Comments