ಉಡುಪಿ ಶ್ರೀಕೃಷ್ಣನ 'ಕನಕನ ಕಿಂಡಿ'ಗೆ ಸ್ವರ್ಣ ಕವಚದ ಮೆರುಗು: ನ.28 ರಂದು ಪ್ರಧಾನಿ ಮೋದಿಯವರಿಂದ ಸಮರ್ಪಣೆ

 

Ad
ಉಡುಪಿ: ಜಗತ್ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣ ಮಠದ ಐತಿಹಾಸಿಕ 'ಕನಕನ ಕಿಂಡಿ'ಗೆ ಇದೀಗ ಚಿನ್ನದ ಕವಚದ ಮೆರುಗು ಸಿಗಲಿದ್ದು, ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ವರ್ಣ ಕವಚವನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಿದ್ದಾರೆ.

ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರಾದ ಪ್ರಮೋದ್ ಮಧ್ವರಾಜ್ ಅವರು ಸೇವಾ ರೂಪದಲ್ಲಿ ಈ ಬಂಗಾರದ ಕವಚವನ್ನು ದೇವಳಕ್ಕೆ ನೀಡಿದ್ದಾರೆ. ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆಯುವುದೇ ಒಂದು ಭಾಗ್ಯವಾದರೆ, ಇನ್ನು ಮುಂದೆ ಚಿನ್ನದ ಹೊದಿಕೆಯಿರುವ ಕಿಂಡಿಯ ಮೂಲಕ ಕೃಷ್ಣನನ್ನು ಕಣ್ತುಂಬಿಕೊಳ್ಳುವುದು ಭಕ್ತರ ಪಾಲಿಗೆ ಸೌಭಾಗ್ಯವೇ ಸರಿ.

ಗುರುಪುರದಲ್ಲಿ ಸಿದ್ಧವಾಯ್ತು ಸ್ವರ್ಣ ಕವಚ

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ಈ ನೂತನ ಸ್ವರ್ಣ ಕವಚವನ್ನು ನಿರ್ಮಾಣ ಮಾಡಲಾಗಿದೆ. ಸಿದ್ಧಗೊಂಡ ಕವಚವನ್ನು ಪ್ರಮೋದ್ ಮಧ್ವರಾಜ್ ಅವರು ಮೊದಲು ತಮ್ಮ ನಿವಾಸಕ್ಕೆ ಬರಮಾಡಿಕೊಂಡರು. ಬಳಿಕ ತಮ್ಮ ಮನೆಯಲ್ಲಿರುವ ಗೋಶಾಲೆಯಲ್ಲಿ ಸ್ವರ್ಣ ಕವಚಕ್ಕೆ ವಿಶೇಷ ಪೂಜೆ ನೆರವೇರಿಸಿ, ನಂತರ ಶ್ರೀ ಕೃಷ್ಣ ಮಠಕ್ಕೆ ಹಸ್ತಾಂತರಿಸಿದರು.

ತಂದೆಯ ಆಸೆ ಈಡೇರಿದ ಸಂಭ್ರಮ

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಮೋದ್ ಮಧ್ವರಾಜ್, "ಕನಕನ ಕಿಂಡಿಗೆ ಚಿನ್ನದ ಕವಚ ತೊಡಿಸಬೇಕು ಎಂಬುದು ನನ್ನ ತಂದೆಯವರ ಬಹುದಿನದ ಆಸೆಯಾಗಿತ್ತು. ಇಂದು ಆ ಕನಸು ನನಸಾಗುತ್ತಿರುವುದು ತೃಪ್ತಿ ತಂದಿದೆ," ಎಂದು ತಿಳಿಸಿದರು.

ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಆಗಮಿಸಿ, ಈ ಸ್ವರ್ಣ ಕವಚವನ್ನು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಲಿದ್ದಾರೆ. ಇದರೊಂದಿಗೆ, ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಚಿನ್ನದ ಲೇಪಿತ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದಿವ್ಯ ದರ್ಶನ ಪಡೆಯುವ ಪುಣ್ಯ ಲಭಿಸಲಿದೆ.

Post a Comment

0 Comments