'ಪತ್ನಿಯನ್ನೇ ಪಣಕ್ಕಿಟ್ಟು ಸೋತ ಗಂಡ': ಮಾವ, ಮೈದುನ ಸೇರಿ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ

 

Ad
ಆಧುನಿಕ ಮಹಾಭಾರತದ ಕಥೆಯಂತಿರುವ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಜೂಜಾಟದಲ್ಲಿ ತನ್ನ ಹೆಂಡತಿಯನ್ನೇ ಪಣವಾಗಿಟ್ಟು ಸೋತ ಗಂಡನ ಒತ್ತಾಯದ ಮೇರೆಗೆ, ಮಾವ ಮತ್ತು ಮೈದುನ (ಗಂಡನ ಅಣ್ಣ) ಸೇರಿ ಒಟ್ಟು ಎಂಟು ಮಂದಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೀರತ್‌ನ ಡ್ಯಾನಿಶ್ ಎಂಬಾತನನ್ನು ಮದುವೆಯಾಗಿದ್ದ ಸಂತ್ರಸ್ತ ಮಹಿಳೆಯು, ಮದುವೆಯಾದಾಗಿನಿಂದಲೂ ಪತಿ ಹಾಗೂ ಅತ್ತೆ-ಮಾವನಿಂದ ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿದ್ದರು.

ವರದಿಗಳ ಪ್ರಕಾರ, ಪತಿ ಡ್ಯಾನಿಶ್‌ಗೆ ಮದ್ಯಪಾನ ಮತ್ತು ಜೂಜಿನ ಚಟವಿತ್ತು. ಡ್ಯಾನಿಶ್ ಕುಡಿದು ಬಂದು ಪತ್ನಿಗೆ ಹಲ್ಲೆ ನಡೆಸುತ್ತಿದ್ದನಲ್ಲದೆ, ಜೂಜಾಡುವ ಸಂದರ್ಭದಲ್ಲಿ ಆಕೆಯನ್ನು ಪಣವಾಗಿಟ್ಟು ಸೋತಿದ್ದಾನೆ. ಜೂಜಿನಲ್ಲಿ ಸೋತ ಬಳಿಕ, ಪರ ಪುರುಷರೊಂದಿಗೆ ಮಲಗುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ, ಪತಿಯ ಪ್ರಚೋದನೆಯ ಮೇರೆಗೆ ಮಾವ ಯಾಮಿನ್, ಗಂಡನ ಅಣ್ಣ ಉಮೇಶ್ ಗುಪ್ತಾ, ಶಾಹಿದ್, ಹಾಗೂ ಮೋನು, ಅನ್ಯುಲ್, ಶೌಕೀನ್ ಸೇರಿದಂತೆ ಒಟ್ಟು ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. 'ನೀನು ವರದಕ್ಷಿಣೆ ತರಲಿಲ್ಲ, ಹಾಗಾಗಿ ನಾವು ಹೇಳಿದಂತೆ ಕೇಳಬೇಕು' ಎಂದು ಮಾವ ಯಾಮಿನ್ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ತಿಳಿಸಿದ್ದಾರೆ.

ಅತ್ಯಾಚಾರಕ್ಕೆ ಮುನ್ನ ಗರ್ಭಿಣಿಯಾಗಿದ್ದ ತನ್ನ ಗರ್ಭವನ್ನು ಪತಿ ಮತ್ತು ಕುಟುಂಬದವರು ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ತನ್ನ ಮೇಲೆ ಆಯಸಿಡ್ ಸುರಿದು, ಬಳಿಕ ನದಿಗೆ ಎಸೆದಿದ್ದರು. ಆದರೆ, ದಾರಿಹೋಕರು ರಕ್ಷಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೀಗ ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಕುಟುಂಬದವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಈ ಕುರಿತು ಬಾಗ್‌ಪತ್‌ನಲ್ಲಿರುವ ಎಸ್‌ಪಿ ಕಚೇರಿಯನ್ನು ಸಂತ್ರಸ್ತರು ಸಂಪರ್ಕಿಸಿದ್ದು, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Post a Comment

0 Comments