ಕಾರ್ಕಳ: ವಿದ್ಯಾರ್ಥಿಗಳಿಗೆ ನಿರಂತರ ಕಿರುಕುಳ ನೀಡುವುದರ ಜೊತೆಗೆ ಧಾರ್ಮಿಕ ಆಚರಣೆಗಳ ಬಗ್ಗೆ ಪ್ರಶ್ನಿಸಿ ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಓರ್ವ ಶಿಕ್ಷಕನನ್ನು ಕರ್ತವ್ಯದಿಂದ ವಜಾಗೊಳಿಸಿರುವ ಘಟನೆ ಕಾರ್ಕಳದ ಮಿಯಾರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ ವಸತಿ ಶಾಲೆಯಲ್ಲಿ ನಡೆದಿದೆ. ವಜಾಗೊಂಡಿರುವ ಶಿಕ್ಷಕನನ್ನು ಕಲಬುರ್ಗಿ ಮೂಲದ ಮದರಸ್ ಮಕಾಂದಾರ್ ಎಂದು ಗುರುತಿಸಲಾಗಿದೆ.
ಶಿಕ್ಷಕ ಮದರಸ್ ಮಕಾಂದಾರ್ ಅವರು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಸ್ಕಿ ಹೊಡೆಯುವ ಶಿಕ್ಷೆ ನೀಡುವುದರಲ್ಲದೇ, ವಿದ್ಯಾರ್ಥಿಗಳು ಧರಿಸುತ್ತಿದ್ದ ಜನಿವಾರ ಮತ್ತು ಕೈಗೆ ಕಟ್ಟುವ ಪವಿತ್ರ ದಾರಗಳ ಬಗ್ಗೆ ಪದೇ ಪದೇ ಪ್ರಶ್ನಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮತ್ತು ಶಾಲೆಯ ಇತರ ಸಿಬ್ಬಂದಿಗೆ ದೂರು ನೀಡಿದ್ದರು.
ಶಿಕ್ಷಕನ ಈ ವರ್ತನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯ ಗ್ರಾಮಸ್ಥರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಘಟನೆಯ ಕುರಿತು ತಿಳಿದ ಪ್ರಾಂಶುಪಾಲರು ಈ ಹಿಂದೆ ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದರಾದರೂ, ಆತ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ತಕ್ಷಣವೇ ಆತನನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

0 Comments