ಕಡಬ: ಮನೆಯ ಹೊರಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪ ಹಾಗೂ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಆರೋಪಿಯೊಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಉಮೇಶ್ ಗೌಡ ಎಂದು ಗುರುತಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಘಟನೆಯು ನವೆಂಬರ್ 13 ರಂದು ರಾತ್ರಿ ಕಡಬ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ನವೆಂಬರ್ 13ರ ರಾತ್ರಿ, ಸಂತ್ರಸ್ತ ಮಹಿಳೆಯು ತಮ್ಮ ಮನೆಯ ಹೊರಭಾಗದಲ್ಲಿರುವ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ, ಆರೋಪಿ ಉಮೇಶ್ ಗೌಡ ಅಲ್ಲಿಗೆ ತೆರಳಿ ಕಿರುಕುಳ ನೀಡಲು ಯತ್ನಿಸಿದ್ದಾನೆ. ಆತಂಕಗೊಂಡ ಮಹಿಳೆಯು ಕೂಡಲೇ ಸಹಾಯಕ್ಕಾಗಿ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಮಹಿಳೆಯ ಕೂಗು ಕೇಳಿ, ಮನೆಯೊಳಗಿದ್ದ ಅವರ ಗಂಡ ಮತ್ತು ಮಕ್ಕಳು ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ.
ಕುಟುಂಬಸ್ಥರು ಹೊರಬಂದಾಗ, ಸ್ಥಳೀಯ ವ್ಯಕ್ತಿಯಾದ ಉಮೇಶ್ ಗೌಡನನ್ನು ಗುರುತಿಸಿ ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿಯು ಅವರೆಲ್ಲರಿಗೂ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ಅಲ್ಲದೇ, ಈ ವೇಳೆ ಮಹಿಳೆಗೆ ಜಾತಿ ನಿಂದನೆಯನ್ನೂ ಮಾಡಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನನ್ವಯ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನವೆಂಬರ್ 16 ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

0 Comments