ಉಡುಪಿಗೆ ಮೋದಿ ಆಗಮನ: ಗೀತಾ ಮಂದಿರ ಉದ್ಘಾಟನೆ, ಬಿಗಿ ಭದ್ರತೆಯಲ್ಲಿ ಕೃಷ್ಣನಗರಿ

 

Ad
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಕೃಷ್ಣನಗರಿ ಉಡುಪಿ ಸಜ್ಜಾಗಿದೆ. ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಬಂದಿಳಿಯಲಿದ್ದಾರೆ. ಬಳಿಕ ಐತಿಹಾಸಿಕ **'ಲಕ್ಷ ಕಂಠ ಗೀತಾ ಪಾರಾಯಣ'**ದಲ್ಲಿ ಭಾಗವಹಿಸಲಿರುವ ಅವರು, ಕೃಷ್ಣ ಮಠದ ಪಕ್ಕದಲ್ಲಿರುವ ಗೀತಾ ಮಂದಿರದ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಭಗವದ್ಗೀತೆ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅನಂತಪದ್ಮನಾಭ ದೇವರ ಮೂರ್ತಿಯನ್ನು ಅನಾವರಣಗೊಳಿಸಿ, ಮೂರ್ತಿಯ ಎದುರು ಕುಳಿತು ಧ್ಯಾನ ಮಾಡಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಮೂಲಗಳು ತಿಳಿಸಿವೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಬರೋಬ್ಬರಿ 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಹೊಸ ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿದೆ.

ಬೆಳಗ್ಗೆ 11 ಗಂಟೆಗೆ ರಥಬೀದಿಗೆ ಆಗಮಿಸುವ ಪ್ರಧಾನಿ, ಮೊದಲು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ನಂತರ ಸುವರ್ಣ ಕನಕನ ಕಿಂಡಿಯನ್ನು ಲೋಕಾರ್ಪಣೆ ಮಾಡಿ ಕನಕದಾಸರ ಗುಡಿಗೆ ಭೇಟಿ ನೀಡಲಿದ್ದಾರೆ. ಮಠದ ಒಳಾಂಗಣ ಪ್ರವೇಶಿಸಿ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು, ಚಿನ್ನದ ತೀರ್ಥ ಮಂಟಪವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಅಷ್ಟಮಠಾಧೀಶರನ್ನು ಭೇಟಿ ಮಾಡಿ ಪ್ರಸಾದ ಸ್ವೀಕರಿಸಲಿದ್ದು, ನಂತರ ಗೀತಾ ಮಂದಿರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಉಡುಪಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಧಾನಿ ಸಂಚರಿಸುವ ರಸ್ತೆಗಳಲ್ಲಿ 2 ಕಿ.ಮೀ ವರೆಗೆ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸುತ್ತಿದ್ದು, ಹೆಲಿಪ್ಯಾಡ್, ಕೃಷ್ಣ ಮಠ ಮತ್ತು ಪ್ರವಾಸಿ ಮಂದಿರದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಿ, ಉಡುಪಿಯನ್ನು 'ನೋ ಫ್ಲೈ ಝೋನ್' (No Fly Zone) ಎಂದು ಆದೇಶಿಸಲಾಗಿದೆ.

Post a Comment

0 Comments