ಪುತ್ತೂರು: ಕಬಕ ಗ್ರಾಮದ ನೆಹರುನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ ದೊಡ್ಡ ಪ್ರಕರಣವನ್ನು ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಕಳವಾಗಿದ್ದ ಕಾಫಿ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪೆರ್ನಾಜೆ ನಿವಾಸಿ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್ ಮತ್ತು ಸುಳ್ಯದ ಆಶ್ರಫ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಸೇರಿ ಒಟ್ಟು 21.44 ಲಕ್ಷ ರೂ. ಮೌಲ್ಯದ 80 ಗೋಣಿ ಕಾಫಿ ಬೀಜಗಳನ್ನು ಕಳವು ಮಾಡಿದ್ದರು.
ಘಟನೆಯ ವಿವರ: ನೆಹರುನಗರದ ಲಾರಿ ಚಾಲಕ ತೃತೇಶ್ ಎಂಬವರು ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಸಾಗಿಸಲು 320 ಗೋಣಿ ಕಾಫಿ ಬೀಜಗಳನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಬಂದಿದ್ದರು. ಡಿಸೆಬರ್ 3ರಂದು ರಾತ್ರಿ ದಾರಿ ಮಧ್ಯೆ ಲಾರಿಯನ್ನು ತಮ್ಮ ಮನೆಯ ಬಳಿ ನಿಲ್ಲಿಸಿದ್ದರು. ಡಿಸೆಂಬರ್ 4ರಂದು ಬೆಳಿಗ್ಗೆ ಲಾರಿ ಮಂಗಳೂರು ಬಂದರು ತಲುಪಿದಾಗ, ಗುಣಮಟ್ಟ ಪರಿಶೀಲನೆ ನಡೆಸಿದ ಏಜೆನ್ಸಿಯವರು ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪರಿಶೀಲನೆ ನಡೆಸಿದಾಗ, ಲಾರಿಯಲ್ಲಿದ್ದ 320 ಗೋಣಿಗಳಲ್ಲಿ 80 ಗೋಣಿ ಕಾಫಿ ಬೀಜಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ದೂರು ದಾಖಲಾದ ಕೂಡಲೇ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಜಾಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳವಾಗಿದ್ದ ಕಾಫಿ ಬೀಜಗಳನ್ನು ಗೋಣಿಕೊಪ್ಪದ ನಾಸೀರ್ ಎಂಬವರ ಗೋದಾಮಿನಲ್ಲಿ ಪತ್ತೆಹಚ್ಚಲಾಗಿದೆ. ವಿಚಾರಣೆ ವೇಳೆ, ಈ ಪ್ರಕರಣದ ಪ್ರಮುಖ ಆರೋಪಿ ಆಶ್ಲೇಷ್ ಭಟ್ ಎಂದು ತಿಳಿದುಬಂದಿದೆ. ಈತನೇ ಆಟೋ ರಿಕ್ಷಾಗಳನ್ನು ಬಾಡಿಗೆಗೆ ಗೊತ್ತುಪಡಿಸಿ ಕಳವು ಮಾಡಿಸಿದ್ದ. ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್ ಮತ್ತು ಸಹಾಯಕ ಆಶ್ರಫ್ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ.

0 Comments